ಗುರುವಾರ, ಫೆಬ್ರವರಿ 27, 2025

ಶಿವಾಪರಾಧ ಕ್ಷಮಾಪಣ ಸ್ತೋತ್ರದ ಕನ್ನಡ ಅನುವಾದ

ಶ್ರೀ ಆದಿ ಶಂಕರಾಚಾರ್ಯರ ಶಿವಾಪರಾಧ ಕ್ಷಮಾಪಣ ಸ್ತೋತ್ರದ ಕನ್ನಡ ಅನುವಾದದ‌ಯತ್ನ.
ತಪ್ಪುಗಳಿದ್ದರೆ ಕ್ಷಮಿಸಿ, ಹರಸಿ.

ಶಿವ ಶಿವ ಶಿವ ಭೋ 

ಅಣು ರೂಪದಿಂದಣುಗನಾಗಿ ಬಪ್ಪ ಮೊದಲಲ್ಲಿ ಮಾಂಸ ಮುದ್ದೆ.
ಕುಣಿಯೋಲುದರದಿ ಮಲಮೂತ್ರ ಮಡುವ ನಡುವಲ್ಲಿ  ನಾನು ಇದ್ದೆ.
ಧಣಿ ಕ್ಷಮಿಸು ಕೊಳೆಯ ಕೂಪದಲ್ಲಲ್ಲಿ ನಿನ ನಾಮ‌ಮರೆತೆ ಇದ್ದೆ 
ಎಣೆಯಿರದ ಮಹಿಮೆಗಳನುಳ್ಳ ಶಿವನೆ ಲಯಗೊಳಿಸು ಪಾಪ ಮುದ್ದೇ.||೧||

ಅಣುಗನಿರೆ ನಾನು ಅಳು ಬುರುಕ ಶುಚಿಯ ನರಿಯದಿರುವಿರವಿನಲ್ಲಿ
ಸ್ತನಪಾನಕಾಗಿ ಚಡಪಡಿಸೆ ಕಾಲು ಕೈ ಬಡಿವ ಸ್ಥಿತಿಗಳಲ್ಲಿ 
ತನು ಜ್ವರಗಳಲ್ಲಿ ಉರಿ ಶೀತದಲ್ಲಿ ವಶನಿರಲು ನೆನೆಯಲಿಲ್ಲ.
ಎಣೆಯಿರದ ಮಹಿಮೆಗಳನುಳ್ಳ ಶಿವನೆ ಲಯಗೊಳಿಸುಪಾಪವೆಲ್ಲ..||೨||

ಕುಣಿದಿದ್ದೆ ಪ್ರಾಯ ಹುಚ್ಚೇಳುತೆರಗೆ ವಿಷಯಗಳ ವಿಷಮತೆಯಲೀ
ಧನಕನಕ ಸುಖದ ಕ್ಷರ ಭ್ರಮೆಗೆ ಬುದ್ಧಿ ಮಾರಿದೆನು ಮಾಯೆಯಲ್ಲೀ
ಮನದಲ್ಲಿ ಮೀಸೆ ಭುಜಬಲದ ಅಮಲು ಇರೆ ಶಿವನ ಚಿಂತೆಯೆಲ್ಲಿ?
ಎಣೆಯಿರದ ಮಹಿಮೆಗಳನುಳ್ಳ ಶಿವನೆ ಲಯಗೊಳಿಸು ಪಾಪವಲ್ಲೀ||೩||

ತನು ಬಡಕಲಾಗಿ ವಯ ಮೀರುತಿರಲು ಮತಿಗೆಲ್ಲಿ ಸಿದ್ಧ ಬುದ್ಧಿ??
ಕೊನೆಯಿರದ ರೋಗ ಪರಿಜನ ವಿಯೋಗದಲಿ ನಿಲದ ಶುದ್ಧ ಬುದ್ಧಿ.
ಮನೆ ಮಠಗಳೆಂಬ ಭ್ರಮೆ ಬಿಡದ ಮನದಿ ಶಿವನೆನಹು ಬರದ ಬುದ್ಧಿ
ಎಣೆಯಿರದ ಮಹಿಮೆಗಳನುಳ್ಳ ಶಿವನೆ ಶುಚಿಗೊಳಿಸು ನನ್ನ ಬುದ್ಧಿ.||೪||


ಘನ ವೇದ ಪಾಠ ಸ್ಮೃತಿ ಕಥಿತ ಮಾರ್ಗ ಬಲು ಕಠಿಣವನುಸರಿಸಲು.
ಮನವಿಹುದು ಗಮಿಸಲರಿಯದಿಹೆ ಮಾರ್ಗ ದ್ವಿಜಕುಲಜನೇ ನಿಜದೊಳು?
ಮನವಿಹುದು ಶ್ರವಣ ಮನನಕ್ಕೆ ನೆನಹು ಜೊತೆ ನೀಡದಂಥ ಮರುಳು.
ಎಣೆಯಿರದ ಮಹಿಮೆಗಳನುಳ್ಳ ಶಿವನೆ ಸರಿಪಡಿಸು ಅರಳು ಮರುಳು||೫||

ನನ ಜಳಕಕಾಗಿ ನಸುಕಿನಲಿ ಹೊತ್ತು ತರಲಿಲ್ಲ ಗಂಗೆಯನ್ನು
ನಿನ ಪೂಜೆಗಾಗಿ ಮೂದಳದ ಬಿಲ್ವದಳ ಕೊಯ್ಯಲಿಲ್ಲವಿನ್ನು
ಹೆಣೆದಿಲ್ಲ ಕೊಳದಿ ಬೆಳೆದಿರುವ ಕಮಲ ಹೂಗಳಲಿ ಮಾಲಿಕೆಯನು.
ಎಣೆಯಿರದ ಮಹಿಮೆಗಳನುಳ್ಳ ಶಿವನೆ ಎಂತಹುದು ಪೂಜೆಯಿನ್ನು.||೬||

ಕೆನೆ ಹಾಲು ಮೊಸರು ಸಿಹಿ ಜೇನು ತುಪ್ಪದಭಿಷೇಕ ಮಾಡಲಿಲ್ಲ
ಘನ ಚಂದನವನು ಕುಂಕುಮವ ಮತ್ತರಸಿನವನು ಪೂಸಲಿಲ್ಲ.
ನಿನ ಮುಂದೆ ದೀಪವಿರಿಸುತ್ತ ಭಕ್ಷ್ಯ ನೈವೇದ್ಯ ಮಾಡಲಿಲ್ಲ.
ಎಣೆಯಿರದ ಮಹಿಮೆಗಳನುಳ್ಳ ಶಿವನೆ ತಪ್ಪುಗಳ ಮನ್ನಿಸೆಲ್ಲ||೭||

ಮನದಲ್ಲಿ ನಿನ್ನ ನೆನೆದಿಲ್ಲ ವಿಪ್ರಗಣವನಾದರಿಸಲಿಲ್ಲ.
ನಿನ ಪ್ರೀತಿಗಾಗಿ ಚರು ಹವನದಲ್ಲಿ ಆಹುತಿಯ ನೀಯಲಿಲ್ಲ
ಮನೆಬಿಟ್ಟು ಗಂಗೆ ಜಲದಲ್ಲಿ ಮಿಂದು ಜಪತಪವ ಮಾಡಲಿಲ್ಲ
ಎಣೆಯಿರದ ಮಹಿಮೆಗಳನುಳ್ಳ ಶಿವನೆ ಮರೆವುಗಳ ಮನ್ನಿಸೆಲ್ಲ.||೮||

ನಿನ ಮಂತ್ರವನ್ನು ಕಮಲಾಸನದಲಿ  ಕೂತೇನು ಜಪಿಸಲಿಲ್ಲ.
ಮನ ಶಾಂತಿಯಲ್ಲಿ ನಿನ ದಿವ್ಯ ರೂಪ ಚಣಕಾಲ ಕಾಣಲಿಲ್ಲ.
ತನು ಮನವ ನಿನ್ನಲನುಸಂಧಿಸಿಲ್ಲ ಶಿವ ಭಾವ ಮೂಡಲಿಲ್ಲ
ಎಣೆಯಿರದ ಮಹಿಮೆಗಳನುಳ್ಳ ಶಿವನೆ ಅಪರಾಧ ಮರೆಸೊ ಎಲ್ಲ||೯||

ಗುಣರಹಿತ - ವಸನ ದಶ ದಿಕ್ಕಿನವನ ನಿಃಸಂಗ ಶಿವನ ಕುರಿತು
ನನ ನಾಸಿಕದೆಡೆ ಕಣ್ ದೃಷ್ಟಿಯಿಟ್ಟು ಬೇರೆಲ್ಲವನ್ನು ಬಿಸುಟು
ಮನದೆಲ್ಲ ಮಲವ ತೊಳೆದಿಡುತ ಹೃನ್ಮನದಿ ನಿನ್ನ ನೆನೆಯಲಿಲ್ಲ 
ಎಣೆಯಿರದ ಮಹಿಮೆಗಳನುಳ್ಳ ಶಿವನೆ ಅಪರಾಧ ಮನ್ನಿಸೆಲ್ಲ||೧೦||

ನಿನ ಶಿರದಿ ಶಶಿಯು ಕೊರಳಲ್ಲಿ ಸರ್ಪ ವಿಷಕಂಠ ಮದನಹರನೇ
ಜಿನುಗುತಿಹ ಗಂಗೆ ಗಜ ಚರ್ಮಧರನೆ ಮುಕ್ಕಣ್ಣ ಸಾಂಬ ಶಿವನೇ
ಜನಜಾಲಕೆಲ್ಲ‌ ನಿನ ನಾಮ ಮದ್ದು ಭವರೋಗ ವೈದ್ಯ ನೀನೇ
ಎಣೆಯಿರದ ಮಹಿಮೆಗಳನುಳ್ಳ ಶಿವನೆ ಮನ್ನಿಸಪ ರಾಧಗಳನೆ||೧೧||

ಧನವಾಹನಾದಿ‌ ಹಯ ಗಜಗಳಾದಿ ರಾಜ್ಯಾದಿ ಕೋಶದಿಂದ
ದನ ಕರುವು ಪುತ್ರ ಬಾಂಧವರ ಮಿತ್ರ ಸಂಪದ ಗಳಿರವಿನಿಂದ
ಚಣದಲ್ಲಿ ದೂರವಾಗ್ವಂಥ ಜೀವವೇನ್ ಪಡೆವು ದಿವುಗಳಿಂದ?
ಮುನಿಜನರು ಕಲಿಸಿರುವ ಶಿವನನಾಮವನು ಭಜಿಸು ಇಂದಿನಿಂದ||೧೨||

ದಿನದಿನವು ವಯಸ ಭಕ್ಷಿಪುದು ಸಮಯ ಮುಪ್ಪಡರಿ ಸವೆವ ದೇಹ
ದಿನ ತಿರುಗಿ ಬರದ ಇಹ ಲೋಕ ಯಾನಕಾಗಿನಿತು ಯಾಕೆ ಮೋಹ?
ಧನ ಹರಿವ ನೀರ ಮೇಲಿರುವ ಗುಳ್ಳೆ ಯಂತಲ್ತೆ ಯಾಕೆ ಮೋಹ ?
ಎಣೆಯಿರದ ಮಹಿಮೆಗಳನುಳ್ಳ ಶಿವನ ಮೇಲಿಡೈ ನಿನ್ನ ನೆನಹ.||೧೩||

ನನ ಕರವು ಚರಣ ನುಡಿ ಕಜ್ಹದಿಂದಲಾದಂಥ ತಪ್ಪುಗಳನು
ಕಣ್ ದಿಟ್ಟಿಯಿಟ್ಟ ಕಿವಿ ಕೇಳಿಕೊಂಡ ಮನ ನೆನೆದ ಪಾಪಗಳನು
ಸಮ ವಿಷಮಗಳನು ನೀನಳೆದುಕೊಂಡು ಪರಿಹರಿಸು ಪಾಪಗಳನು
ಎಣೆಯಿರದ ಮಹಿಮೆಗಳನುಳ್ಳ ಶಿವನ ಬಿಟ್ಟಾರು ದೇವರಿನ್ನು.||೧೪||

ಸುಬ್ರಹ್ಮಣ್ಯ ಬರ್ವೆ ಎಂ.

ಬುಧವಾರ, ಸೆಪ್ಟೆಂಬರ್ 14, 2022

#ವೇಷ ಲೇಖನ ಮಾಲೆ ಭಾಗ ೫

#ವೇಷ

ಭಾಗ ೫

ಈಗ ಜಯ ವಿಜಯರ ವೇಷ ಮಾಡುತ್ತಿದ್ದವರಿಗೆ ದೊಡ್ಡ ವೇಷ. ಹಿರಣ್ಯಾಕ್ಷ, ಹಿರಣ್ಯಕಶಿಪು. ಹಿರಣ್ಯಾಕ್ಷ ಚಿನ್ನದ ಕಣ್ಣುಳ್ಳವನು, ಗಮನಿಸಿ! ಕಣ್ಣುಳ್ಳವನು ಚಿನ್ನದ ದೃಷ್ಟಿಯುಳ್ಳವನಲ್ಲ. ಚಿನ್ನದ ಕಣ್ಣು ಚಂದಕ್ಕೆ ಮಾತ್ರ. ಆ ಕಣ್ಣಿಂದ ನೋಡಿದ್ದೆಲ್ಲಾ ಚಿನ್ನವಲ್ಲ. ಯಾರೋ ಸರಿಯಾಗೇ ಹೇಳಿದ್ದಾರೆ. ಸೌಂದರ್ಯ ನೋಡುವ ಕಣ್ಣುಗಳಲ್ಲಿದೆ, ವಸ್ತುಗಳಲ್ಲಲ್ಲ ಎಂದು.  ಚಿನ್ನದ ಬಣ್ಣ ಹಳದಿ ಅಲ್ವೇ? ಹಾಗಾಗಿ ಹಿರಣ್ಯಾಕ್ಷನಿಗೆ ನೋಡಿದ್ದೆಲ್ಲಾ ಕೆಟ್ಟದ್ದಾಗಿ ಕಾಣುವುದು. ಕಾಮಾಲೆ ಕಣ್ಣಿನಂತೆ.‌

ಹಿರಣ್ಯಾಕ್ಷ ತಪಸ್ಸು ಮಾಡಿದ್ದೇ ಮಾಡಿದ್ದು. ಓಂ ಬ್ರಹ್ಮದೇವಾಯ ನಮಃ ಅಂತ ಎರಡು ಸಾರಿ ಕೂಗುವಷ್ಟರಲ್ಲಿ ಬ್ರಹ್ಮ ಕಾಯ್ತಾ ಇದ್ದ ಅಂತ ಕಾಣುತ್ತೆ, ಕೂಡಲೇ ಬಂದು ಆಶೀರ್ವಾದ ಭಂಗಿಯಲ್ಲಿ ನಿಂತು 'ವತ್ಸಾ ಏನು ಬೇಕು ಕೇಳು, ಕೇಳಿದ್ದನ್ನು ಕೊಡುತ್ತೇನೆ'  ಅಂದ. ಅದು ಬಾಯಿ ಪಾಠದ ಮಾತು. ಯಾರೇ ಅವನನ್ನು ಓಂ….. ಅಂತ ಕರೆದ್ರೆ ಕೇಳೋ ಡೈಲಾಗ್ ಇದೊಂದೇ.

'ಮರಣವಿಲ್ಲದ ವರ ಕೊಡು' 

'ಅದೊಂದು ಬಿಟ್ಟು ಬೇರೆ ಏನು ಬೇಕಾದರೂ ಕೇಳು ಕೊಡುತ್ತೇನೆ' 

ಇದೂ ಬಾಯಿಪಾಠವೇ. ಅದು ಸಿಗುವುದಿಲ್ಲ ಅಂತ ಗೊತ್ತಿದ್ದೂ ಕೇಳುವ ಪ್ರಶ್ನೆ. ಚೌಕಾಶಿ ವಿಧಾನ.‌ ಸಂತೆಯಲ್ಲಿ ಸರಕು ಮಾರುವವ ೨೦೦ ರ ಸಾಮಾನಿಗೆ ೧೦೦೦ ಹೇಳಿ ನಂತರ ಕಮ್ಮಿ‌ಮಾಡಿಸುವುದು. ಎಷ್ಟು ಕಮ್ಮಿ ಬಂದರೂ ೩೦೦ - ೪೦೦ ಗ್ಯಾರಂಟೀ. ಇದೂ ಹಾಗೇ.

' ಹೌದಾ …. ಹಾಗಾದರೆ, ನನಗೆ ಮರಣ ಬರುವುದೇ ಆದರೆ‌ ಸುರನರೋರಗಕಿನ್ನರಕಿಂಪುರುಷ ಪ್ರಾಣಿ ಪಕ್ಷಿ ಕ್ರಿಮಿ ಕೀಟಾದಿಗಳಿಂದಲೂ ಬರಬಾರದು. ನನಗೆ ದಿನವೂ ೧೦೦ ಹಂದಿ ಆಹಾರವಾಗಿ ಸಿಗಲಿ. ಮರಣ ಬರುವುದಾದರೂ ಹಂದಿಯಿಂದ ಬರಲಿ'

ಸಿಕ್ಕಿ ಬಿದ್ದ ನಮ್ಮ ರಾಕ್ಷಸ. ಅವನಿಗೆ ಒಂದು ಅತೀ ಆತ್ಮವಿಶ್ವಾಸ. ತಾನು ದಿನಾಲು ೧೦೦ ಹಂದಿ ಕೊಲ್ಲುವ ತನಗೆ ಹಂದಿ ಏನು ಮಾಡೀತು? ಅಂತ.

'ತಥಾಸ್ತು'

ಬಾಯಿಪಾಠದ ಬ್ರಹ್ಮ ಚೌಕಿಗೆ ಮರಳಿದ.

ಈಗ ಹಿರಣ್ಯಾಕ್ಷನ ಆಟೋಪ ನೋಡಬೇಕು. ಮಂಗನಿಗೆ ಕಳ್ಳು ಕುಡಿಸಿದ ಹಾಗೆ. ಎಲ್ಲ ಕಡೆ ಹೋಗಿ ಹುಡುಕಿ ಹುಡುಕಿ ವೀರರನ್ನು ಸೋಲಿಸುತ್ತಾ ಕೊಲ್ಲುತ್ತ ನಡೆದ. ಇನ್ನಾರು ಇದ್ದಾರೆ ಅಂತ ಹುಡುಕಾಟದಲ್ಲೂ ಅನೇಕ ಸುತ್ತು ಬಂದ. ನಾರದರು ಸಿಕ್ಕಿದರು. ನಾರದರು ಒಮ್ಮೊಮ್ಮೆ ಬೆಕ್ಕು ಅಡ್ಡ ಬಂದ ಹಾಗೆ ಬರುವುದು. ಅವರಿಗೆ ಯಾರತ್ರವೂ ವೈರ ಇಲ್ಲ. ನಾರಾಯಣ ಅಂತಲೂ ಹೇಳ್ತಾರೆ, ಶಂಕರ ಅಂತಲೂ ಹೇಳ್ತಾರೆ. ಎಲ್ಲಿ ಯಾವುದು ಹೇಳಬೇಕು ಅಂತಲೂ ಗೊತ್ತಿದೆ. 

ಸರಿ, ಹಿರಣ್ಯಾಕ್ಷ ಇನ್ನಾರು ವೀರರಿದ್ದಾರೆ ಅಂತ ಕೇಳಿದ.  

'ನಂ ನಾರಾಯಣ ಇದ್ದಾನೆ' ಅಂತ ಹೇಳಿದರು ನಾರದರು.

ವರ ಇದೆಯಲ್ಲಾ? ನಾರಾಯಣ ಏನು ಮಾಡಿಯಾನು?

'ನಾನು ಅವನನ್ನು ಹುಡುಕಿಕೊಂಡು ಹೋಗಿದ್ದೆ. ವೈಕುಂಠದಿಂದ ಜಾಗ ಖಾಲಿ ಮಾಡಿ ಓಡಿ ಹೋಗಿದ್ದಾನೆ' ಅಂದ ಹಿರಣ್ಯಾಕ್ಷ.

ನಾರದರು ಚೌಕಿಯಲ್ಲಿ ನೋಡ್ಕೊಂಡೇ ಬಂದಿದ್ದಾರೆ. 

'ನೀನು ಒಂದು ಕೆಲಸ ಮಾಡು, ಅವನ‌ ಹೆಂಡತಿ ಭೂಮಿಯನ್ನು ಅಪಹರಿಸು. ಆಗ ಮೂಗುದಾರ ಎಳೆದ ಎತ್ತಿನ ತರ ಬರುತ್ತಾನೆ' 

ಅಂತ ಬೋಧನೆ ಮಾಡಿದರು.  ನಾರದರು ಒಳ್ಳೇದಕ್ಕೆ ಹೇಳ್ತಾರೋ ಹಾಳಾಗ್ಲಿಕ್ಕೆ ಹೇಳ್ತಾರೋ ಗೊತ್ತೇ ಆಗುವುದಿಲ್ಲ.  ಹಿರಣ್ಯಾಕ್ಷ ಭೂಮಿಯನ್ನು ಅಪಹರಿಸಿ ರಸಾತಲದಲ್ಲಿ ಇಟ್ಟ.   ಅವಳ ಬಗ್ಗೆ ಚಿಂತಿಸುತ್ತಾ ಕನಸು ಕಾಣುತ್ತಾ ತಿಂದ ಹಂದಿಯ ಲೆಕ್ಕ ತಪ್ಪಿತು. ನೂರಾದುದೇ ಗೊತ್ತಾಗ್ಲಿಲ್ಲ. 

ನಾರಾಯಣ ಸಿಗುವುದೊಂದು ಬಾಕಿ, ನೆಲ ಅಗೆಯುತ್ತಾ ಮರ ಬೀಳಿಸುತ್ತಾ ಮುನ್ನುಗ್ಗುತ್ತಿದ್ದ. ನಾರಾಯಣ ಬರಲಿಲ್ಲ. ಚೌಕಿಯಿಂದ ಹಂದಿ ಬಂತು, ಬಿಳಿ ಹಂದಿ, ಶ್ವೇತವರಾಹ ಅಂತಲೂ ಕರೆಯುತ್ತಾರೆ. ಭಾರಿ ಚಂದ ಆಗಿತ್ತು ವೇಷ. ಹಂದಿ ಬಂದದ್ದೇ ಬಂದದ್ದು ಬಾಯಿಯಲ್ಲಿ ನೀರೂರಿತು.

ಬ್ರಹ್ಮನ ವರದ ಒಳಾರ್ಥ ಗೊತ್ತಾಗ್ಲಿಲ್ಲ ಹೆಡ್ಡನಿಗೆ. ನೂರು ಹಂದಿ ಆಹಾರವಾಗಲಿ. ಅಂತ ವರ. ಅಂದರೆ ನೂರಾ ಒಂದನೆಯದನ್ನು ಕೆಣಕಬೇಡ ಅಂತ ಒಳಾರ್ಥ. ಹಂದಿಯನ್ನು ಕೆಣಕಿದ. ಆಗಲೇ ಕುಣಿದು ಕುಣಿದು ದಣಿದಿದ್ದ. ವೀರರನ್ನು ಜಗತ್ತಿನೆಲ್ಲೆಡೆ ಹುಡುಕಿ ಸೋಲಿಸಿ ತಾನೂ ಸುಸ್ತಾಗಿದ್ದ. ಹಂದಿಯನ್ನು ಎದುರಿಸಲಾಗಲೇ ಇಲ್ಲ. ಹಿರಣ್ಯಾಕ್ಷನನ್ನು ತಿವಿದು ಕೊಂದಿತು. ಭೂಮಿಯನ್ನು ರಸಾತಳದಿಂದ ಬಿಡಿಸಿ ಕರೆತಂದ.

ಭೂಮಿಗೆ ಗೊತ್ತಾಗಿ ಹೋಯಿತು. ಈ ಹಂದಿ ಯಾರು ಅಂತ. ದಿತಿಯ ಅಕಾಲಿಕ ಆಸೆ ಎರಡು ಬಣ್ಣದ ವೇಷಕ್ಕೆ ವೇದಿಕೆ ಸೃಷ್ಟಿಸಿತು. ಈಗ ಭೂಮಿಗೂ ಒಂದು ಆಸೆಯಾಯಿತು. ಈ ರೂಪದಲ್ಲೂ ನಾರಾಯಣ ಬರುತ್ತಾನಾದರೆ ಹಾಗೇ ಅವನಲ್ಲಿ‌ ಐಕ್ಯವಾಗಬೇಕು ಅಂತ. ತೆರೆ ಪುನಃ ಎಳೆದರು. ಈ ಆಸೆಯೂ ಒಳ್ಳೆಯ ಪರಿಣಾಮ ನೀಡಲಿಲ್ಲ. ಏನಾಯ್ತು ಅಂತ ನಾಳೆ ಹೇಳ್ತೇನೆ.

ನಮಸ್ಕಾರ.

ಬುಧವಾರ, ಸೆಪ್ಟೆಂಬರ್ 7, 2022

#ವೇಷ ಲೇಖನ ಸರಣಿ ಭಾಗ‌೩

ಭಾಗ ೩.


ಅಂತೂ ನಮ್ಮ ಬ್ರಹ್ಮ‌ ಸೃಷ್ಟಿ ಶುರು ಮಾಡಿದ. ಅವನೊಬ್ಬನೇ ಎಷ್ಟು ಅಂತ ಮೂರ್ತಿಗಳನ್ಬು ಕೆತ್ತಿಯಾನು? ಕಲ್ಲು ಹುಡುಕಬೇಕು, ಚಾಣ ಸಾಣೆ ಹಿಡಿಯಬೇಕು, ಕೆತ್ತಬೇಕು, ಬಿಸಿ ಮಾಡಬೇಕು, ದೃಷ್ಟಿ ನೀಡಬೇಕು, ಇಷ್ಟಾದರೆ ಸಾಕೆ?? ಈ ಮಕ್ಕಳಿಗೆ ಸುಮ್ಮನೆ ಇರುವ ಬೊಂಬೆ ಕೊಟ್ಟು ನೋಡಿ? ಎರಡೇ ನಿಮಿಷ.‌ ಮತ್ತೆ ರಂಪ‌ ಶುರು.‌ ಅದೇ ಗೊಂಬೆಗೆ ಕಿವಿ‌ಹಿಂಡಿ ಟರ್ರ್ ರ್ರ್ ಎಂದು ತಿರುಗುವಂತೆ ಮಾಡಿ; ಆಡುತ್ತಾ ಕುಳಿತಿರುತ್ತವೆ. ಹಾಗೆಯೇ ಬ್ರಹ್ಮನೂ ನಿರ್ಜೀವ ಬೊಂಬೆಗಳಿಗೆ ಎಲ್ಲಿಂದಲೋ ಹುಡುಕಿ ಹೆಕ್ಕಿ ತಂದು ಬ್ಯಾಟರೀ ಅಳವಡಿಸುತ್ತಾನೆ. ಅದಕ್ಕೆ ಜೀವ, ಆತ್ಮ ಅಂತ ಹೆಸರಿಡೋಣ. 


ಒಮ್ಮೊಮ್ಮೆ ಅವ್ಯವಸ್ಥೆ ಆಗುವುದುಂಟು. ಬ್ಯಾಟರಿಯ ಕ್ಷಮತೆಗೆ ಮೀರಿದ ಆಕಾರದ ಬೊಂಬೆಯಾದರೆ ಬೇಗ ಕೆಳಗೆ ಉರುಳುತ್ತದೆ. ಆಕಾರ ಮೀರಿದ ಕ್ಷಮತೆ ಕೊಟ್ಟನೋ, ಅತೀ ಚಟುವಟಿಕೆಯಿಂದ ಬಾಕಿ ಎಲ್ಲರೂ ಕಂಗಾಲಾಗುತ್ತಾರೆ. ತೊಂದರೆ ಏನು ಅಂದ್ರೆ, ಅಳವಡಿಸಿದ ಜೀವ ಹೊಂದಿಕೆಯಾಗಲಿಲ್ಲ ಅಂದ್ರೆ ಅದನ್ನು ತೆಗೆದು ಬೇರೆ ಫಿಟ್ ಮಾಡುವ ಹಾಗಿಲ್ಲ. ಮೂರ್ತಿಯೇ ಬೇರೆ ಆಗಬೇಕು ಮತ್ತೆ.


ಆದರೂ ಮೆಚ್ಚಬೇಕು. ನಮ್ಮ ಬ್ರಹ್ಮ ಅಡ್ಡಿಯಿಲ್ಲ. ಕೆಲವು ಸೃಷ್ಟಿ ಮಾಡಿದ. ಸಾಕಾಗಿ ಹೋಯಿತು. ಪ್ರಪಂಚದಲ್ಲಿ ಮೊಟ್ಟ ಮೊದಲ ಬಾರಿಗೆ delegation of power ಪರಿಚಯ ಮಾಡಿಸಿಕೊಟ್ಟವನು ಅವನೇ. ಅವನ ಮಕ್ಕಳಲ್ಲೇ ಕೆಲವರನ್ನು ಪ್ರಜಾಪತಿಗಳು ಎಂದು ಹೆಸರಿಸಿದ. ಅವರಿಗೆಲ್ಲ GPA ನೀಡಿದ.


ಅಂತಹ ಅವನ ಮಕ್ಕಳಲ್ಲಿ ಒಬ್ಬರು ಕಶ್ಯಪ ಬ್ರಹ್ಮರು. ವಿಶೇಷ ಅಂದರೆ ಈ ಪ್ರಜಾಪತಿಗಳನ್ನೂ ಬ್ರಹ್ಮ ಅಂತಲೇ‌ ಕರೆಯುವುದು. ಎಲ್ಲಾ GPA ಪ್ರಭಾವ. ಕಶ್ಯಪರಿಗೆ ಹದಿಮೂರು ಮಂದಿ ಮಡದಿಯರು.‌ ಅವರಲ್ಲಿ‌ ನಮ್ಮ  ದಿತಿಯೂ ಒಬ್ಬಳು.


ಪುಂಡುವೇಷಗಳು ಇವೆಯಲ್ಲಾ! ಅವರು ಕಶ್ಯಪರಿರುವ ಡೇರೆಗೆ ಬಂದರು. ಪುಂಡತನ‌ ಹೋಗಬೇಕಲ್ಲಾ? ಅದಕ್ಕೆ ಆ ವೇಷವೂ ಬೇಡ; ಆವೇಷವೂ ಬೇಡ ಅಂತ ರಾಕ್ಷಸ ವೇಷದ ಪೆಟ್ಟಿಗೆಗೆ ಕೈ ಹಾಕಿದರು.  ಹೊಸಬರಾದರೂ ಯಾರೂ ತಡೆಯಲಿಲ್ಲ. ವೇಷಕ್ಕೆ ಕೂತರು.


ಆ ಕಡೆ ಕಶ್ಯಪರ ವೇಷ ತಯಾರಾಗ್ತಿದೆ. ರಾಕ್ಷಸರ ಮುಖ ಬರೆಯುವಷ್ಟರಲ್ಲೇ ಕಶ್ಯಪರ ವೇಷ ಪೂರ್ಣವಾಯಿತು.  ಕಶ್ಯಪರ ವೇಷ ಮಾಡುವುದು ಸುಲಭ, ತಲೆಗೊಂದು ಜುಟ್ಟು, ಹಣೆಗೆ ಬೊಟ್ಟಿಟ್ಟು ಕಂಕುಳಲ್ಲಿ ದರ್ಬೆ ಕಟ್ಟು ಹಿಡ್ಕೊಂಡ್ರೆ ವೇಷ ಮುಗೀತು. ಮತ್ತೆ ಒಂದು ಕಾವಿ ಪಂಚೆ ಕಚ್ಚೆ ರುದ್ರಾಕ್ಷಿ ಮಾಲೆ.


ಆದರೆ ಕಶ್ಯಪರಾಗುವುದು ಕಷ್ಟ. ದಿನವೂ ತಣ್ಣೀರಿನ‌ ಸ್ನಾನ ಮೂರು ಹೊತ್ತೂ ವೇದೋಕ್ತವಾದ ನಿತ್ಯಾಹ್ನಿಕ ಅದೂ ಪುಸ್ತಕದಲ್ಲಿ ಹೇಳಿದ ಹಾಗೇ; ಚೂರೂ ಆಚೀಚೆ ಆಗುವಂತಿಲ್ಲ. ಮತ್ತೆ ಲೋಕ ಕಲ್ಯಾಣಕ್ಕಾಗಿ ಹೋಮ ಹವನ‌ ನಡೆಸುತ್ತಲೇ ಇರಬೇಕು. ಅದೆಲ್ಲದರ ಮಧ್ಯೆ ಹದಿಮೂರು ಹೆಂಡಿರು. ಒಬ್ಬೊಬ್ಬರದೂ ಒಂದೊಂದು ಸ್ವಭಾವ. ಸಾಲದ್ದಕ್ಕೆ ಬ್ರಹ್ಮ ಕೊಟ್ಟ ಕೆಲಸ ಇದೆಯಲ್ಲಾ??


ದಿತಿದೇವಿ ಜಂಭದ ಕೋಳಿ ದಕ್ಷ ಪ್ರಜಾಪತಿಯ ಮಗಳು. ಒಂದು ರೀತಿ ಜಂಭ, ದುಡುಕು ಸ್ವಭಾವ, ತಾಮಸೀ ಸ್ವಭಾವಗಳು ಅವಳ ಹುಟ್ಟು ಗುಣ.  ಕಶ್ಯಪರದ್ದು ಗೊತ್ತಲ್ಲಾ? ಯಾವಾಗಲೂ ಪೂಜೆ ಪುನಸ್ಕಾರ. ಅದಕ್ಕೇ ಆದ್ಯತೆ. ಅದರ ನಡುವೆ ಬಿಡುವು ಸಿಕ್ಕಾಗ (ಸಿಕ್ಕರೆ) ಇನ್ನಿತರ ಕೆಲಸಗಳು. ಅ ಸಮಯದಲ್ಲಿ ಒಂದು ಭಾಗ ಹೆಂಡಿರದ್ದು. ಅದರ ಹದಿಮೂರನೇ ಒಂದು ಭಾಗ ದಿತಿ ದೇವಿಗೆ. 


ತನ್ನ ತಂಗಿ ಅದಿತಿ ದೇವಿಯ ಮಕ್ಕಳು ದೇವತೆಗಳು. ಅವರನ್ನು ಎಲ್ಲರೂ ಸೇರಿ‌ ದೊಡ್ಡ ಜನ ಅಂತ ಮಾಡಿ ಆಗಿತ್ತು. ಸ್ವರ್ಗದ ಅಧಿಕಾರ ನೋಡಿ! ಹೊಟ್ಟೆಗಿಚ್ಚು ಯಾರಾದರೂ ಪಡಲೇ ಬೇಕು. ಅಂಥಾ ಸಂಪತ್ತು. ಓಡಾಡುವುದಕ್ಕೆ ಉಚ್ಛೈಶ್ರವ, ಐರಾವತ, ಬೇಕಾದುದನ್ನು ಕೊಡುವುದಕ್ಕೆ ಕಾಮಧೇನು ಕಲ್ಪ ವೃಕ್ಷ ಇನ್ನೂ ಅನೇಕ ವಸ್ತು - ವ್ಯಕ್ತಿ ವಿಶೇಷಗಳು. ಸಾಲದ್ದಕ್ಕೆ ಕಶ್ಯಪರನ್ನೂ ಸೇರಿ ಮುನಿಜನರೆಲ್ಲ ಮಾಡುವ ಉಪಾಸನೆಗಳ, ಹೋಮ ಹವನಗಳಲ್ಲಿ ನೆನೆಯುವುದು ಇವರನ್ನೇ.  ಹಾಗಾಗಿ ಇವಳಿಗೆ ತನ್ನ ಮಕ್ಕಳಿಗೆ ಈ ಎಲ್ಲಾ ಸಂಪತ್ತಿನ‌ ಸುಖ ಸಿಗುತ್ತಿಲ್ಲವಲ್ಲ? ಎಂಬ ಸಹಜ‌ ಕೊರಗೂ ಇತ್ತು. ತಾನು ಹಿರಿಯಕ್ಕನಲ್ಲವೇ? ಕಶ್ಯಪರು ತನ್ನ ಮಕ್ಕಳಿಗೆ ಅನ್ಯಾಯ ಮಾಡುತ್ತಿದ್ದಾರೆಂಬ ಭಾವನೆ ಬೇರೆ. 


ಈ ಕಶ್ಯಪರು ಮಾಡುತ್ತಿದ್ದುದೂ ಹಾಗೇ ಅನ್ನಿ.  ದಿತಿಗೆ ಇನ್ನೊಂದು ಬೇಜಾರಿತ್ತು. ತನ್ನ ಮಕ್ಕಳನ್ನು ಕಾಯುವಲ್ಲಿ ಬೆಳೆಸುವಲ್ಲಿ ತನ್ನ ಗಂಡನಿಗೆ ಆಸಕ್ತಿಯಿಲ್ಲ ಎಂದು.  ಒಮ್ಮೆ ಏನಾಯ್ತು ಅಂದ್ರೇ….

ಶುಕ್ರವಾರ, ಸೆಪ್ಟೆಂಬರ್ 2, 2022

#ಸುಭಾಷಿತಗಳೆಂಬವಿಸ್ಮಯ

#ಸುಭಾಷಿತಗಳೆಂಬವಿಸ್ಮಯ 

ಇಂದಿನ‌ಸುಭಾಷಿತ.

ಆಚಾರಾಲ್ಲಭತೇ ಚಾಯುರಾಚಾರಾಲ್ಲಭತೇ ಪ್ರಜಾ | ಆಚಾರಾದನ್ನಮಕ್ಷಯ್ಯಮಾಚಾರೋ ಹಂತ ಪಾತಕಮ್|

ಆಚಾರಃ ಪರಮೋ ಧರ್ಮ ಆಚಾರಃ ಪರಮಂ‌ತಪಃ
ಆಚಾರಃ ಪರಮಂ ಜ್ಞಾನಂ ಆಚಾರಾತ್ ಕಿಂ ನ ಸಾಧ್ಯತೇ?|

ಆಚಾರ ಎನ್ನುವ ಪದದ ಅರ್ಥವ್ಯಾಪ್ತಿ ತುಂಬಾ ದೊಡ್ಡದು. ಹಾಗಾಗಿ.  ಬೇರೆಯವರಿಗೆ‌ ತೊಂದರೆ ಕೊಡದಿರುವುದೂ ಆಚಾರವೇ. ಪರೋಪಕಾರವೂ ಆಚಾರವೇ. ಆಚಾರದಿಂದ ಆಯಸ್ಸು ವೃದ್ಧಿಯಾಗುವುದು, ಸತ್ ಸಂತತಿ ಪ್ರಾಪ್ತಿಯಾಗುವುದು, ಆಚಾರದಿಂದ ಅನ್ನ, ಸಂಪತ್ತು ಅಕ್ಷಯವಾಗುತ್ತದೆ ಆಚಾರ ಪಾಪವನ್ನು ಕಳೆಯುತ್ತದೆ. ತಾನು ಆಚಾರವಂತನೆನ್ನಿಸಿಕೊಳ್ಳಲು ವರುಷಗಳ ಪರಿಶ್ರಮ ಬೇಕು.

ಆರೋಗ್ಯಕರವಾದ ಜೀವನ ಪದ್ಧತಿ, ಆಹಾರ ಪದ್ಧತಿಗಳು ಜೀವನವನ್ನೇ ಹಸನುಮಾಡುತ್ತವೆ. ಆದರೆ ಬಾಹ್ಯ ಪ್ರಪಂಚದ ಪ್ರಲೋಭನೆಗಳ ಮಧ್ಯೆ ಇಂತಹ ಸಾತ್ವಿಕ, ಮೇಲ್ನೋಟಕ್ಕೆ ಸಪ್ಪೆಯಾಗಿ ತೋರುವ, ಪರಿಣಾಮದಲ್ಲಿ ಸಿಹಿಯಾಗಿರುವ ವಿಚಾರಗಳತ್ತ ಗಮನ ಹರಿಸುವುದೆಂತು? ಅಷ್ಟೇ ಅಲ್ಲದೇ ಇವುಗಳಿಂದ ಇಚ್ಛಿತ ಪರಿಣಾಮ instant coffee ಥರ ಕೂಡಲೇ ಸಿಗುವುದಿಲ್ಲ. ಬೀಜ ಬಿತ್ತಿ, ನೀರೆರೆದು ಗೊಬ್ಬರ ಹಾಕಿ ಕಳೆ ತೆಗೆದು ಬೆಳೆಯುವವರೆಗೆ ಕಾದಾಗ ಮಾತ್ರ ಫಲ ಪ್ರಾಪ್ತಿ.

ಕಾಯುವ ಕೆಲಸವೆಲ್ಲ ನಮ್ಮಿಂದಾಗಲಿಕ್ಕಿಲ್ಲ. ನಮಗೇನಿದ್ದರೂ ಕೂಡಲೇ ಸಿಗಬೇಕು ಅನ್ನುವವರೂ ಇದ್ದಾರೆ. ಹಿಂದಿಯಲ್ಲಿ ಒಂದು ಗಾದೆಯಿದೆ. ಜಲ್ದೀ ಕಾ ಕಾಮ್ ಸೈತಾನ್ ಕಾ. ಅವಸರವಸರವಾಗಿ ಮಾಡಿದ ಕಾರ್ಯ ಕೆಟ್ಟುಹೋಗುತ್ತದೆ. 

ಸುಬ್ರಹ್ಮಣ್ಯ ಬರ್ವೆ ಎಂ.

#ಸುಭಾಷಿತಗಳೆಂಬವಿಸ್ಮಯ

#ಸುಭಾಷಿತಗಳೆಂಬವಿಸ್ಮಯ 

ಇಂದಿನ‌ ಸುಭಾಷಿತ

ಷಡ್ದೋಷಾಃ ಪುರುಷೇಣೇಹ ಹಾತವ್ಯಾ‌ ಭೂತಿಮಿಚ್ಛಿತಾ.
ನಿದ್ರಾ ತಂದ್ರಾ ಭಯಂ‌ ಕ್ರೋಧಃ ಆಲಸ್ಯಃ ದೀರ್ಘಸೂತ್ರತಾ.

ಷಡ್ವೈರಿಗಳ ಬಗ್ಗೆ ಕೇಳಿದ್ದೇವೆ. ಷಡ್ದೋಷ ಏನಿದು? ನಿದ್ದೆ, ಹುರುಪಿಲ್ಲದ ಸ್ಥಿತಿ, ಆಲಸ್ಯ, ಹೆದರಿಕೆ ಸಿಟ್ಟು, ಕೆಲಸಗಳನ್ನು ಮುಂದೂಡುತ್ತಾ ಇರುವುದು ಇವುಗಳು ಸಾಧಕನಿಗೆ ಎದುರಾಗುವ ಆರು ದೋಷಗಳು.

ಆಲಸ್ಯವಂತೂ ಎಲ್ಲ ಸಂದರ್ಭಗಳಲ್ಲೂ ವರ್ಜ್ಯವೇ. ದೀರ್ಘಸೂತ್ರತೆ ಹೆಚ್ಚಿನ ಸಂದರ್ಭಗಳಲ್ಲಿ‌ ದೋಷಗಳಂತೆ ಕಾಣುವುದು. ಆದರೂ ಕೆಲವೊಮ್ಮೆ ಕಷ್ಟಕರ ಸಂದರ್ಭದಲ್ಲಿ ನಿರ್ಣಯಾತ್ಮಕವಾಗಿ ಯಾವೆಡೆ ವಾಲಿದರೂ ನಷ್ಟವೇ ಆಗುವುದಾದರೆ ನಿರ್ಣಯಿಸದಿರುವುದೇ ಉತ್ತಮ ಎಂದು ಅನ್ನಿಸುವುದುಂಟು. ನಿರ್ಣಯಿಸದಿರುವುದೂ ಒಂದು ನಿರ್ಣಯವೇ ತಾನೆ?

ನಿದ್ದೆ ಸ್ವಭಾವತಃ ಶತ್ರುವಲ್ಲ. ಮಿತಿ ಮೀರಿದ ನಿದ್ದೆ ಬುದ್ಧಿಯ ಮೊನಚನ್ನು ಕಡಿಮೆ ಮಾಡಬಹುದು. ಇತರೇ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು. ನಿದ್ದೆಯಿಂದ ಏನು‌ ಅನಾಹುತವಾಗುವುದೆಂದು ಕುಂಭಕರ್ಣನಿಂದಲೂ, ನಿದ್ದೆಯಲ್ಲಿದ್ದವನನ್ನು ಎಬ್ಬಿಸಿದರೆ ಏನಾಗುವುದೆಂಬುದನ್ನು ಮುಚುಕುಂದ - ಕಾಲಯವನನ ಕತೆಯಿಂದಲೂ ಅರಿತಿದ್ದೇವೆ. ಆಮೆ ಮೊಲದ ಕತೆಯ ವಿಲನ್ ಈ ನಿದ್ದೆಯೇ. ಕಾರ್ಯತತ್ಪರರಾಗುವಾಗ ನಿದ್ದೆ ಬಂದರೆ ಗೆಲ್ಲುವವರೆಂದೇ‌ ಇರುವವರೂ ಸೋಲುತ್ತಾರೆ. 
ಭಯ ಮತ್ತು ಕ್ರೋಧಗಳ ಬಗ್ಗೆ ಹೇಳಿ ಪ್ರಯೋಜನವಿಲ್ಲ. ಭಯ ಕಾರ್ಯದಲ್ಲಿ ತೊಡಗುವರೇ ಸಮಸ್ಯೆಯಾದರೆ ಕ್ರೋಧ ಕೈಗೆ ಬಂದ ತುತ್ತನ್ನೂ ಇಲ್ಲವಾಗಿಸುತ್ತದೆ. ಇಲ್ಲಿ ಒಂದು ಸ್ವಾರಸ್ಯಕರವಾದ ಕತೆ ನೆನಪಾಗುತ್ತದೆ.

ಒಬ್ಬನಿಗೆ ತಪಸ್ಸಿಗೆ ಮೆಚ್ಚಿದ ದೇವರು ಮೂರು ಕಲ್ಲುಗಳನ್ನು ಕೊಟ್ಟನಂತೆ. ಪೂಜೆ ಮಾಡುವಾಗ ಬೇಕಾದುದನ್ನು ನೆನಪಿಸಿಕೊಂಡು ದೇವರಿಗೆ ಅರ್ಪಿಸಿದರೆ ಬೇಕಾದ ವಸ್ತು‌ಹೇರಳವಾಗಿ ಸಿಗುತ್ತದೆ ಎಂದು. ಅವನ ಹೆಂಡತಿ ಆಸೆ ಬುರುಕಿ. ಯಾವಾಗಲೂ‌ ಗಂಡನನ್ನು ಅದು ಕೊಡು, ಇದು ತಾ, ಓಲೆ ಬೇಕು ಎಂದೆಲ್ಲ ಪೀಡಿಸುತ್ತಿದ್ದಳು. ಅವನು ರೋಸಿ ಹೋಗಿಯೇ ದೇವರ ಮೊರೆ ಹೊಕ್ಕಿದ್ದು. 

ದೇವರ ಕೃಪೆ ಆದುದರಿಂದ ಇನ್ನಾದರೂ ಇವಳ ಪೀಡೆಯಿಲ್ಲದೇ ಹಾಯಾಗಿರಬಹುದೆಂದು ಕೊಂಡ.

ಪೂಜೆಗೆ ಕುಳಿತಿದ್ದಾನೆ. ಅಭಿಷೇಕ ಆಯಿತು ಆರತಿ‌ ಆಯಿತು. ಇನ್ನೇನು ದೇವರು ಕೊಟ್ಟ ಮೊದಲನೇ ಕಲ್ಲು ಅರ್ಪಿಸಬೇಕು; ಎಲ್ಲಿದ್ದಳೋ ಏನೋ ಬಿರ್ರನೇ ಬಂದು 'ಏನು ಬೇಡಬೇಕೆಂದಿದ್ದೀರಿ?'. ಮೊದಲೇ ಇವಳ ಬಗ್ಗೆ ಸಿಟ್ಟು; ಈಗ ನೆತ್ತಿಗೇ ಏರಿತು. ' ನಿನ್ನ ತಲೆ'  ಎಂದ. ಏನಾಶ್ಚರ್ಯ! ಮನೆ ತುಂಬಾ ಹೆಂಡತಿಯ ತಲೆಯಂತಹ ತಲೆಗಳು. ಸೂರಿನಲ್ಲಿ ನೇತಾಡುವ, ಹೆಂಡತಿಯ ಮೈಗೆ ಅಂಟಿಕೊಂಡ, ನೆಲದಲ್ಲಿ ಬಿದ್ದುಕೊಂಡ ತಲೆಗಳ ರಾಶಿ.

ಅವನಿಗೆ ತನ್ನ ತಪ್ಪಿನ ಅರಿವಾಯಿತು. ಸರಿ ಮಾಡಬೇಕಲ್ಲ? ಎರಡನೇ ಕಲ್ಲು ಅರ್ಪಿಸಿ ' ಹೆಂಡತಿಯ ತಲೆಗಳೆಲ್ಲಾ ಹೋಗಲಿ' ಎಂದ. 

ಬಂದ ತಲೆಗಳೇನೋ ಹೋದುವು. ಹೆಂಡತಿಯ ಇದ್ದ ತಲೆಯೂ ಮಾಯವಾಯಿತು. ಮೊದಲೇ ತಲೆಯಿಲ್ಲದ ಹೆಂಡತಿ. ಈಗ ತಲೆಯೂ ಹೋದರೆ ಇವಳ ಜತೆ ಸಂಸಾರ ಹೇಗೆ ಮಾಡುವುದು ಎನ್ನಿಸಿ ಮೂರನೇ ಕಲ್ಲು ಅರ್ಪಿಸಿ ' ಹೆಂಡತಿಯ ಮೊದಲಿದ್ದ ತಲೆ ಬರಲಿ' ಎಂದ. 

ಸಿಟ್ಟಿನ ಕಾರಣ, back to square one. ಎಂಬಂತಾಯಿತು. 

ಈ ಆರು ದೋಷಗಳನ್ನು ಗೆಲ್ಲದ ಹೊರತು ಆರು ವೈರಿಗಳನ್ನು ಗೆಲ್ಲಲಾಗದು. ಏನಂತೀರಿ!!

ಸುಬ್ರಹ್ಮಣ್ಯ ಬರ್ವೆ ಎಂ.

ಶುಕ್ರವಾರ, ಆಗಸ್ಟ್ 19, 2022

ವೇಷ ಲೇಖನ ಸರಣಿ ಭಾಗ ೪

#ವೇಷ 

ಭಾಗ ೪.

ಮೊನ್ನೆ ಹೇಳಿದ್ನಲ್ಲ?… ಊರು ಮುಳುಗಿಸುವಷ್ಟು ನೀರು… ಆ ನೀರು ಊರು ಮುಳುಗಿಸಿತು. ಆಗಲೇ ಕಡತಗಳೆಲ್ಲಾ ನೀರಲ್ಲಿ ಕೊಚ್ಚಿ‌ಹೋಯಿತು.  ಆಗ ಬ್ರಹ್ಮ ಅರ್ಜೆಂಟಲ್ಲಿ‌ ಒಂದು ಪುಸ್ತಕ ತೆಗೆದು ಕಂಕುಳಲ್ಲಿ ಇರಿಸಿಕೊಂಡ. ನಮ್ಮ‌ ಜನರಾದರೆ ಏನ್ ಮಾಡ್ತಾರೆ ಹೇಳಿ? ನೆರೆ ಬಂದ್ರೆ, ದುಡ್ಡಿನ ಚೀಲ ಮೊದಲಿಗೆ ತೆಗೆದಿಡುತ್ತಾರೆ. ಅದೇ ನೋಡಿ ನಾವು‌ ಹೀಗಿರೋದು. ಮಕ್ಕಳ ಶಾಲೆಯ ಪುಸ್ತಕಕ್ಕೂ ನಂತರದ ಆದ್ಯತೆ.

ಬ್ರಹ್ಮ ತೆಗೆದಿಟ್ಟ ಪುಸ್ತಕ ಅಂತಿಂಥದ್ದಲ್ಲ. ವೇದ.  ಅದೊಂದಿದ್ದರೆ ಎಲ್ಲ ಪುನಃ ಸೃಷ್ಟಿ ಮಾಡಬಹುದು ಎಂಬ ವಿಶ್ವಾಸ ಅವನಿಗೆ. ಅದು ದಿತಿಯ ಮಗ ತಮನಿಗೆ ತಿಳಿಯಿತು. ಆ ಪುಸ್ತಕ ಕಿತ್ತುಕೊಂಡು ತನ್ನ ಮನೆ ಅಟ್ಟದಲ್ಲಿ ಇಟ್ಟ. ಅವನಿಗೂ ಒಂದು ಆಸೆ ಇಡೀ‌ಜಗತ್ತನ್ನು ಜ್ಞಾನದ ಬಲದಿಂದ ಆಳಬೇಕು ಅಂತ. ಪುಸ್ತಕ ಕದ್ದವರಿಗೆಲ್ಲ ಜ್ಞಾನ ಒಲಿಯುತ್ತದೆಯೇ? ಅವನ ಮನೆ ಪಾತಾಳದಲ್ಲಿ ಇತ್ತಂತೆ.  ಆ ಪುಸ್ತಕದಲ್ಲಿದ್ದ ವಿದ್ಯೆ, ಜ್ಞಾನವೆಲ್ಲ ತಮನ ಪಾಲಾದರೆ ಎಲ್ಲ ಅಧ್ವಾನ ಮಾಡುತ್ತಾನೆ ಅಂತ ಎಲ್ಲರೂ ಹೆದರಿದರು. ಒಂದು ಧೈರ್ಯ ಅಂದರೆ ಒಮ್ಮೆ ಓದಿದರೆ ಅರ್ಥವಾಗದಂಥ ಪದಪುಂಜಗಳಲ್ಲಿ ಬರೆಯಲಾಗಿತ್ತು ವೇದ. ಮತ್ತೆ ಮತ್ತೆ ಓದಿದಾಗ ಬಾಯಿಪಾಠ ಮಾಡಿದಾಗ ಅದರ ಅರ್ಥ ತಿಳಿಯುವುದು ಅಂತ ಅಲ್ಲ, ಆದರೆ ಹೊಸ ಜ್ಞಾನ ಸ್ಫುರಣೆಯಾಗುತ್ತದೆ. ಅಂಥ ಕೋಡೆಡ್ ಭಾಷೆಯಲ್ಲಿ ಬರೆದ ವೇದಗಳನ್ನು ತಮ ಅಷ್ಟು ಬೇಗ ಅರ್ಥಮಾಡಿಕೊಳ್ಳಲಾರ ಎಂಬ ಧೈರ್ಯ. ಆದರೂ ಬೇಗ ತರಬೇಕಲ್ಲಾ? ಎಲ್ಲರೂ ಜಗತ್ತಿನ‌ ಚೌಕೀ ಮನೆ ವೈಕುಂಠಕ್ಕೆ ಬಂದರು. ನೆನಪಿಡಿ, ಸುತ್ತ ಎಲ್ಲ‌ ನೀರೇ.  ಏನಾದ್ರೂ‌ ಮಾಡಿ ಪುಸ್ತಕ ತಂದುಕೊಡು ದೇವ್ರೇ ಅಂತ ಬ್ರಹ್ಮ‌ ಗೋಗರೆದ.

ವಿಷ್ಣು ವೇಷಕ್ಕೆ ಕೂತ. ಮೀನಿನ ರೆಕ್ಕೆ ಕಿವಿರು‌ ಎಲ್ಲ‌ ಕಟ್ಟಿಕೊಂಡ. ಕಟ್ಟಿಕೊಂಡದ್ದೋ ಹುಟ್ಟಿಕೊಂಡದ್ದೋ ಅಂತ ಗೊತ್ತಾಗದಂಥ ನಾಜೂಕು. ಅಂಥಾ ಚಾಕಚಕ್ಯತೆ ವೇಷದಲ್ಲಿ. ವೇಷ ಮಾಡಿದ್ರೆ ಹಾಗೆ ಮಾಡ್ಬೇಕು. ಮುಖಕ್ಕೆ ಬಣ್ಣ ಬೇಕೂಂತ ಇಲ್ಲ. ನೀರಿನಲ್ಲೇ ಇಳಿಯಬೇಕಾದ ಮೀನು ಅಲ್ವಾ. 

ರಭಸದಿಂದ ಇಳಿದು ಪಾತಾಳಕ್ಕೆ ಹೋಗಿ ತಮನಿಂದ ಪುಸ್ತಕ ತಂದು ಬ್ರಹ್ಮನಿಗೆ ಕೊಟ್ಟ. ತಮನನ್ನು ಕೊಂದ. 

ತನ್ನ ಮಗನನ್ನು ಕೊಂದನಲ್ಲಾ ಅಂತ ದಿತಿಗೆ ಕೋಪ. ಯಾರಮೇಲೆ ಅಂತ ಇಲ್ಲ ಒಟ್ಟು ಕೋಪ. ತನ್ನ ಮಗ ತಮ ಮಾಡಿದ್ದು ಸರಿಯಿಲ್ಲ ಎಂಬ ಅರಿವು ಒಳಗೊಳಗೆ ಅವಳಿಗೂ ಇತ್ತು. ಆದರೆ ಒಪ್ಪಿಕೊಳ್ಳಲು ಅದಿತಿಯ ಮೇಲಿನ ಕಿಚ್ಚು ಬಿಡಬೇಕಲ್ಲ.. ಕಶ್ಯಪರು ಅದಿತಿಯ ಮಕ್ಕಳನ್ನೇ ರಕ್ಷಿಸೋದು ಅಂತ ಅವರ ಮೇಲೂ ಸಿಟ್ಟು.

ಒಟ್ಟು ತಲೆ ಕೆಟ್ಟಿತ್ತು. ಕಶ್ಯಪರದ್ದು ಮುಗಿಯದ ಅನುಷ್ಠಾನ. ಒಂದು ಮುಗಿದ ತಕ್ಷಣ ಇನ್ನೊಂದು. ಬ್ರಹ್ಮ ಕೊಟ್ಟ ಸೃಷ್ಟಿ ಕಾರ್ಯ ಬರೇ ಅದಿತಿಯ ಮೂಲಕ ಮಾತ್ರ ಆದರೆ ಸಾಕೆ? ಇನ್ನುಳಿದವರಿಗೂ ಸಂತಾನ ಬೇಡವೇ?  ಕಾದು ಕಾದು ಹೊತ್ತಲ್ಲದ ಹೊತ್ತು ಮುಸ್ಸಂಜೆಯಲ್ಲಿ ಹೋಗಿ ತನ್ನ ಕಷ್ಟ ಹೇಳಿಕೊಂಡಳು. ತನ್ನ ಮಕ್ಕಳೆಲ್ಲಾ ಕೊಲೆಯಾದರು ಹೀಗೆ ಆದರೆ ತನ್ನ ಹೆಸರು ಹೇಳಲು ಯಾರೂ ಉಳಿಯುವುದಿಲ್ಲ ಇತ್ಯಾದಿ ಇತ್ಯಾದಿ. 

ನಮ್ಮ ಯಕ್ಷಗಾನದಲ್ಲಿ, ಯಾವುದನ್ನು ಹೇಳದೇ ಹೇಳಿಬಿಡಬೇಕೋ, ಅಂಥ ಸನ್ನಿವೇಷ ಬಂದಾಗ ಪರದೆ ಎಳೆದರೆ ಸೈ. ಹಾಗೆ ಈಗ ಪರದೆ ಎಳೆದುಬಿಡೋಣ.‌

ದಿತಿ ದೇವಿಯ ಹಟ ಗೆದ್ದಿತು. ಗರ್ಭಿಣಿಯಾದಳು. ಅವಳಿ ಮಕ್ಕಳನ್ನು ಹಡೆದಳು. ಪರದೆ ಎತ್ತಿದಾಗ ನಮ್ಮ‌ ಪುಂಡುವೇಷದವರ ಜೋಡಿ ರಾಕ್ಷಸ ವೇಷ. ಉತ್ಪಾತ ನೋಡಬೇಕು. ನಾಯಿಗಳು ಊಳಿಟ್ಟುವಂತೆ, ಉಲ್ಕಾಪಾತವಾಯಿತಂತೆ, ನೆರೆ ಬಿರುಗಾಳಿಗಳು ಬಂದವಂತೆ. ಈಗಿನ ಜನ ಕೇಳುವುದಿಲ್ಲ. ಇಲ್ಲದಿದ್ದರೆ ಮುಸ್ಸಂಜೆ ಹೊತ್ತು ಅಥವಾ ಮನೆಗಳಲ್ಲಿ ದೀಪ ಹಚ್ಚುವ ಹೊತ್ತು ಎಲ್ಲೂ ಹೊರಗಡೆ ತಿರುಗಾಡಬಾರದು, ಶಿವ ಪ್ರಪಂಚ ಸಂಚಾರ ಮಾಡುವ ಹೊತ್ತು ಅಂತ ಹೇಳ್ತಾರೆ. ಅಂಥ ಹೊತ್ತಿನ ಆಸೆಯಿಂದ ಆದ ಅನರ್ಥ ಉತ್ಪಾತಗಳೇ ಆದುವು.

ಎಲ್ಲವನ್ನು ಸಾಂಕೇತಿಕವಾಗಿ ತೋರಿಸಬೇಕಲ್ಲಾ? ಆಗ ಸಹಾಯಕ್ಕೆ ಬರುವುದು ದೊಂದಿ, ರಾಳದ ಪುಡಿ, ಚಂಡೆಯ ಗದ್ದಲ.  

ಈ ದಿತಿಯ ಮಕ್ಕಳು ಹುಟ್ಟಿದ ತಕ್ಷಣ ಮೇಲೆ ನೋಡುವುದು. ದೇವತೆಗಳು ಇದ್ದಾರಲ್ಲಾ? ಅವರಿದ್ದ ಮಟ್ಟಕ್ಕೆ ಏರುವ ಯೋಚನೆಯಿಲ್ಲದಿದ್ದರೂ ಅವರನ್ನು ಕಾಲು ಎಳೆದು ಕೆಳಗೆ ಬೀಳಿಸುವ ಯೋಚನೆ ಇದೆ. ದೇವೇಂದ್ರ ದೇವಪೀಠಕ್ಕೇರಲು ನೂರು ಆಶ್ವಮೇಧ ಮಾಡಿ ಕಷ್ಟ ಪಟ್ಟು ಮೇಲೆ ಬಂದವನು.  ದೈತ್ಯರು ರಟ್ಟೆಯ ತ್ರಾಣದಿಂದ ಒಮ್ಮೆ ಪುರಂದರನನ್ನು ಕೆಳಗಿಳಿಸಿದರೂ  ಆ ಪಟ್ಟ ಶಾಶ್ವತವಾಗಿ ಅವರಿಗೆ ಆಗುವುದು ಸಾಧ್ಯವಿಲ್ಲ. 

ಈ ಬಾರಿ ದಿತಿ ದೇವಿ ಬಡ ಪೆಟ್ಟಿಗೆ ಬಿಡುವಂತೆ ಕಾಣುತ್ತಿಲ್ಲ. ಹಾಗೇ ಏರಬೇಡಿ. ತಪಸ್ಸು ಮಾಡಿ, ತಾಲೀಮು ಮಾಡಿ ಅಂತೆಲ್ಲ ತಾಕೀತು ಮಾಡಿ ಕಾಡಿಗೆ ಕಳಿಸಿದಳು.

ತಪಸ್ಸಿಗೆ..

ಇವತ್ತಿಗೆ ಸಾಕು. ನಾಳೆ ನೋಡುವಾ.

ಸುಬ್ರಹ್ಮಣ್ಯ ಬರ್ವೆ ಎಂ.

ಬುಧವಾರ, ಆಗಸ್ಟ್ 17, 2022

ವೇಷ ಲೇಖನ ಸರಣಿ ಭಾಗ 2.

 ಚೌಕಿ ಮನೆಯಿಂದ ವೇಷ ರಂಗಕ್ಕೆ ಕಳಿಸುವುದೆಂದರೆ ಭೋಜನ‌ಕೂಟಗಳಲ್ಲಿ ಅಡುಗೆಯನ್ನು ಸರತಿಯಂತೆ ಪಂಕ್ತಿಗಳಿಗೆ ಕಳಿಸಿದಂತೆ.‌ ಎಲೆ ಹಾಕಿ ಮೊದಲಿಗೆ ತೆಗೆದುಕೊಂಡು ಹೋಗುವುದೇನು? ನೀರು. ಜಗತ್ತಿಗೂ ಹಾಗೆಯೇ. ಭಗವಂತ ಮೊದಲು‌ ಕೊಟ್ಟದ್ದು ನೀರನ್ನಂತೆ. ಜೀವ ದ್ರವ. ಜೀವಗಳ ಬೆಳವಣಿಗೆಗೆ ಮೂಲ. ಮೊಟ್ಟೆಯನ್ನು ಒಡೆದು ನೋಡಿದರೂ ಒಳಗಿರುವ ಭ್ರೂಣ ದ್ರವದಲ್ಲಿ ತೇಲಾಡುತ್ತಿರುತ್ತದೆ. ಇಷ್ಟು ಪುಷ್ಟಿ ಸಾಕಲ್ಲ? ನೀರಿನಲ್ಲೇ ಅಂತೆ ಹಿಂದೆ ಇದ್ದ ಜೀವಗಳು ವಸ್ತುಗಳು ಮುಳುಗಿದ್ದು. ಇಡೀ ವಿಶ್ವದಲ್ಲಿ ನೀರೋ ನೀರು. ಲೆಕ್ಕ ಪತ್ರಗಳು, ಪಾಪ ಪುಣ್ಯದ ಲೆಕ್ಕ ಎಲ್ಲ ಕೊಚ್ಚಿ ಹೋಯಿತು. ಜೀವರೆಲ್ಲ ನಾಶವಾದರೆಂದ ಮೇಲೆ ಲೆಕ್ಕ ಮಾತ್ರ ಇಟ್ಟುಕೊಂಡು ಏನು ಮಾಡುವುದು?

ಆಗ ಜಗತ್ತಿನ ತಾಯಿ‌ ಸೃಷ್ಟಿಗೆ ಒಂದು ಮೂರ್ತ ರೂಪ ಕೊಟ್ಟಿದ್ದಿರಬೇಕು.‌ ಅದನ್ನು ಬ್ರಹ್ಮ ಎನ್ನೋಣ. ಅವನ ನೆನಪಿನ‌ ಚಿಪ್ಪಿನಲ್ಲಿ, ಸುಲಭದಲ್ಲಿ ಅರ್ಥವಾಗಬೇಕಾದರೆ memory card ನಲ್ಲಿ ಹಿಂದೆ ಇದ್ದ ಎಲ್ಲ ಸೃಷ್ಟಿಯ ನೀಲಿ ನಕಾಶೆ, ಅಥವಾ ನಮೂನೆಗಳು ನಿಕ್ಷೇಪವಾಗಿದ್ದುವು. ಅವೆಲ್ಲ ಬ್ರಹ್ಮನ ಹೊಟ್ಟೆಯಲ್ಲಿತ್ತು ಎಂದು ಸರಳವಾಗಿ ಹೇಳಬಹುದೇನೋ?! ಇಷ್ಟೆಲ್ಲ ತನ್ನಲ್ಲಿ ಇದೆ ಎಂದು ತಿಳಿದದ್ದೇ ತಡ. ಅವನ ತಲೆಗೇರಿತು. ತಾನೇ ದೊಡ್ಡವ ಎಂಬ ಅಹಂ ಭಾವ. ಅದನ್ನು ನಾವೆಲ್ಲಾ ದೇವೀ ಮಹಾತ್ಮೆಯ ಆಟಗಳಲ್ಲಿ ಸಾಕಷ್ಟು ಬಾರಿ ನೋಡಿದ್ದೇವೆ. ಆಗ ನಮ್ಮ ಭಗವಂತ, ಮೇಲು ಕೀಳು ಎಲ್ಲ ಮನಸ್ಸಿನ ಭಾವನೆ ಅಷ್ಟೇ, ನಿಜವಾಗಿ ಎಲ್ಲವೂ ಸಮಾನವೇ, ಶ್ರೇಷ್ಠವೇ ಎಂದು ತಿಳಿ ಹೇಳಿದ. ಅದನ್ನು ತೋರಿಕೊಡಲು ಅವನು ಹೊರಬರಲು ಆಯ್ಕೆ ಮಾಡಿದ್ದು ಬ್ರಹ್ಮನ ದೇಹದ ಅಧೋದ್ವಾರ.
ತುಂಬಿದ ಕೊಡ ತುಳುಕುವುದಿಲ್ಲ ನೋಡಿ! ಇದನ್ನು ಹೇಳಲೂ ನೀರೇ ಬೇಕು. ಇನ್ನೂ ಬೇಕೋ? ಸಾಗರವೂ ಹಾಗೆಯೇ. ತೆರೆಗಳು ತೀರಗಳಲ್ಲಿ ಮಾತ್ರ. ಆಳ ಸಮುದ್ರದಲ್ಲಿ ನಿತ್ಯ ನೀರವ, ಗಂಭೀರ ಮೌನ. ಹಾಗೆಂದು ಅದೂ ಕದಡುವುದಿಲ್ಲ ಎಂದಲ್ಲ. ಪ್ರಳಯ ಸದೃಶವಾದ ಹೆದ್ದೆರೆಗಳು ಬಂದಾಗ ಅಲ್ಲೂ‌ ಅಲ್ಲೋಲಕಲ್ಲೋಲ‌ ಆಗಬಹುದು.
ಇಲ್ಲಿ ನನ್ನ ಈ ಕೆಳಗಿನ ಅಪ್ರಕಟಿತ ಮುಕ್ತಕ ಪ್ರಸ್ತುತ ಎನ್ನಿಸೀತು.
ತುಂಬಿರುವ ಕೊಡವನ್ನು ಹೊರುವುದಸದಳವಲ್ಲ
ಅಂಬುಧಿಯ ನಡುವ ಜಲ ಶಾಂತವಲ್ತೆ??
ತುಂಬದಿಹ‌ ಘಟಕೇನು ಡೌಲು ಡಂಭಕ ಗೊತ್ತೆ
ಅಂಬುಧಿಯ ತಟ ತೆರೆಯು ಗುರುನಾಥನೇ||೨೧||
ವಿಷ್ಣುವಿನ ಹೊಟ್ಟೆ ಹೊಕ್ಕಾಗಲೇ ಬ್ರಹ್ಮನಿಗೆ ಅರಿವಾದುದು, ತಾನೇನೂ ದೊಡ್ಡ ಸಂಗತಿಯಲ್ಲ ಎಂದು. ಹೊರಬರಲು ದಾರಿ ಹುಡುಕಿದ್ದೇ ಹುಡುಕಿದ್ದು. ಮೇಲಕ್ಕೆ ಹೋದಷ್ಟೂ ಮುಗಿಯದ ಆಯ ಆಕೃತಿ. ಇದು ಅಗದು ಅಂದುಕೊಂಡು ಕೆಳಗಿಳಿದರೆ ಕೆಳಗೂ ಮುಗಿಯದ ಪ್ರಪಾತ. ಒಂದು ಕ್ಷಣ ಮೇಲಾವುದು ಕೆಳಗಾವುದು ಎಂದೂ ಅರಿಯದ ಸ್ಥಿತಿ ಬಂದಾಗ ಭಗವಂತನ ಸ್ಮರಣೆ ಅವನ ನಾಲಿಗೆಯಲ್ಲೂ ಬಂತಂತೆ. ಆಗ ಹೊಕ್ಕುಳಿಂದ ಹೊರಬಂದದ್ದು ನಾವೆಲ್ಲಾ ಚಿತ್ರಗಳಲ್ಲಿ ಮತ್ತೆ ಆಟದಲ್ಲಿ ನೋಡಿದ್ದೇವೆ.
ಇರಲಿ, ಜ್ಞಾನೋದಯ ಪ್ರತಿಯೊಬ್ಬರಿಗೂ ಆಗುತ್ತದೆ. ಯಾವಾಗ ಆಯಿತು, ಎನ್ನುವುದರಿಂದ ಅವರ ಉದ್ಧಾರ ಮತ್ತು ಪತನಗಳು ನಿರ್ಣಯವಾಗುತ್ತವೆ.
ಮೊದಲು ಹೇಳಿದ ಪುಂಡುವೇಷಗಳು ಇವೆಯಲ್ಲ? ಅವರಿಗೆ ನಾಳೆಯಿಂದ ಬೇಡ ಅಂತ ಹೇಳಿದ ಕೂಡಲೇ ಆಗಿತ್ತಂತೆ ಜ್ಞಾನೋದಯ. ಅದರೆ ನಿರ್ಣಯದಿಂದ‌ ಹಿಂದೆ ಸರಿಯುವುದಿಲ್ಲ, ಭಗವಂತ. ಭಕ್ತರ, ಅಭಿಮಾನಿಗಳ ಬೇಡಿಕೆಯ ಮೇರೆಗೆ ತಾನೇ ಎಲ್ಲ ನಡೆಯುವುದು? ಅಂತೂ ಮೇಳ ಬಿಟ್ಟರು. ನಿಮಗೆ ಗೊತ್ತಾಯ್ತಾ?? ಅ ಪುಂಡರು ಜಯ ವಿಜಯರು. ಆಭಿಮಾನಿಗಳು ನಾಲ್ಕು ಜನ ಸನಕಾದಿ ಮುನಿಗಳು. ಆಗಲೇ ಅಯ್ಕೆ ಸಿಕ್ಕಿತ್ತಂತೆ, ಕಡಿಮೆ ಕಷ್ಟವೆನ್ನಿಸುವ ಏಳು ಜನ್ಮವೋ? ಅಥವಾ ಹೆಚ್ಚು ಕಷ್ಟ ಪಡುವ ಇತರರಿಗೂ ಕಷ್ಟವನ್ನೇ ಉಂಟುಮಾಡುವ ಮೂರೋ? ಎಂದು. ಇವರು ಬೇಗ ಬರಬೇಕಲ್ಲಾ ಅದಕ್ಕೆ ಮೂರು ಅಂದರು.‌
ಇವರು ಯಾವ ಮೇಳ ಸೇರಿದರು? ವೇಷ ಹೇಗಿತ್ತು? ಮತ್ತೆ ನೋಡುವಾ .. ಆಯ್ತಾ !
ನಮಸ್ಕಾರ
ಸುಬ್ರಹ್ಮಣ್ಯ ಬರ್ವೆ ಎಂ.

ಶಿವಾಪರಾಧ ಕ್ಷಮಾಪಣ ಸ್ತೋತ್ರದ ಕನ್ನಡ ಅನುವಾದ

ಶ್ರೀ ಆದಿ ಶಂಕರಾಚಾರ್ಯರ ಶಿವಾಪರಾಧ ಕ್ಷಮಾಪಣ ಸ್ತೋತ್ರದ ಕನ್ನಡ ಅನುವಾದದ‌ಯತ್ನ. ತಪ್ಪುಗಳಿದ್ದರೆ ಕ್ಷಮಿಸಿ, ಹರಸಿ. ಶಿವ ಶಿವ ಶಿವ ಭೋ  ಅಣು ರೂಪದಿಂದಣುಗನಾಗಿ ಬಪ್ಪ ಮೊದಲ...