ಗುರುವಾರ, ಡಿಸೆಂಬರ್ 3, 2020

ಹೊಟ್ಟೆಬಾ(ಬ)ಕ

ಹೊಟ್ಟೆ ಬಾ(ಬ)ಕ 

ಏಕಚಕ್ರ ಗ್ರಾಮದಲ್ಲಿ
ನೂಕುತಿರಲು ಕಾಲ ಹೊಟ್ಟೆ
ಬಾಕ ಪುತ್ರನೋರ್ವನನ್ನು ಸಾಕಲಾಗದೇ|
ಸೋಕದಂತೆ  ದುಷ್ಟ ದಿಟ್ಟಿ
ಕಕ್ಕುಲತೆಯ ಪುತ್ರರೈವ
ರೇಕಮತ್ಯದಿಂದಲಿರಲು ತಾಯಿ ಕುಂತಿಯು||

ಕ್ಷತ್ರಿಯಾಣಿಯೆಂಬ ಮಾತ
ಚಿತ್ತದಲ್ಲಿರಗೊಡದಿರುತ
ಪುತ್ರರೈವರಭ್ಯುದಯವನಾಶಿಸುತ್ತಲೀ|
ಪುಟ್ಟ ಮನೆಲಿ ವಾಸವಿರಲು
ಪಟ್ಟ ಪಾಡು ದೊಡ್ಡದಾಯ್ತು
ದುಷ್ಟನೋರ್ವ ವಾಸವಿದ್ದ ಸನಿಹದಲ್ಲಿಯೆ||

ಊರನೆಲ್ಲ ಸೂರೆಗೊಂಬ
ಕ್ರೂರನಾತ ನರರ ತಿಂದು
ಪಾರವಿಲ್ಲದಂಥ ನೋವನೀಡೆ ಜನರಿಗೆ|
ಊರ ಹೊಕ್ಕು ಬಾರದಿರಲು
ಹಿರಿಯರೆಲ್ಲ ಸೇರಿ ಬಕಗೆ 
ಭೂರಿಭೋಜ್ಯ ಮಾಂಸ ನೀಡಲೊಪ್ಪಿಕೊಂಡರು||

ದುಃಖದಿಂದ ಪಾಳಿಯಂತೆ
ಮುಕ್ಕಲಿಕ್ಕೆ ಬಂಡಿಯನ್ನ
ಲೆಕ್ಕವಿಲ್ಲದಂತೆ ತುಂಬಿ ಕಳುಹುತಿದ್ದರು|
ದುಃಖ ತಪ್ತ ಮನೆಯ ಒಡತಿ 
ದುಃಖಿಸಿದಳು ತನ್ನ ಮಗನ
ಮುಕ್ಕಲೆಂದು ಕಳುಹುವಂಥ ಪಾಳಿ ಬಂದಿರೆ||

ಎನ್ನ ಮಗನ ಸಾಕಲಾರೆ
ಚೆನ್ನ ನಾಲ್ಕು ಮಕ್ಕಳುಳಿವರ್
ನಿನ್ನ ಮಗನ ಬದಲು ಭೀಮನನ್ನು ಕಳುಹುವೆ|
ಎನ್ನುತಲೇ ಕುಂತಿ ತಾನು
ತಿನ್ನುವನ್ನ ಗಾಡಿಲಿಟ್ಟು
ಚೆನ್ನ ಭೀಮನನ್ನೆ ಕಳುಹಿ ಹಿರಿಮೆ ಮೆರೆದಳು||

ಭೂರಿ ಭಕ್ಷ ಭೋಜ್ಯವನ್ನು
ದಾರಿಯಲ್ಲೆ ಭೀಮಸೇನ
ಚೂರು ಬಿಡದೆ ಮುಗಿಸಿ ಖಾಲಿ ಗಾಡಿಯಲ್ಲಿರೆ|
ದೂರದಲ್ಲೆ ಕಂಡು ಬಕನು 
ಭೋರನೊಂದು ಗುದ್ದು ನೀಡೇ
ಢರ್ರೆಂದು ತೇಗಿ ಬಕನನಣಕವಾಡಿದ||

ಘೋರಯುದ್ಧದಲ್ಲಿ ಬಕನ 
ಹೋರಿ ಕೊಂದು ಶಕ್ತಿ ಯ ಕಿ
ಮ್ಮೀರ ದೂರದಿಂದಲರಿವ ಹಾಗೆ ಮೆರೆದನು|
ಕ್ರೂರ ದನುಜ ಗಡಣವೆಲ್ಲ
ನೂರು ಗಜದ ಬಲದ ಭೀಮ
ದೂರವಿದ್ದು ತಮ್ಮುಳಿವನು ಹರಸುತಿದ್ದರು||

ಸುಬ್ರಹ್ಮಣ್ಯ ಬರ್ವೆ ಎಂ.

ಭೋಗ ಷಟ್ಪದಿ.






















ಅಮರ ಧಾರೆ

ಅಮರ ಧಾರೆ.

ಭೋಗ ಷಟ್ಪದೀ.


ಗಂಗೆಯೆನ್ನುಮರಧಾರೆ
ಸಿಂಗರಿಸುತ ಶಿವನ ಜಟೆಯ
ತುಂಗ ಶಿಖರ ಮಾಲೆ ಸೆಲೆಯ ಸಾಗಿ ಬಂದಳು|
ಹೊಂಗಿರಣನ ವಂಶಿಗಳಿಗೆ 
ಮಂಗಳಕರವಾಗಲೆಂದೆ
ಶೃಂಗಸಮ ತಪಸ್ಸಿಗೆ ಮನ ಸೋತು ಬಂದಳು||

ಮೇಲು ಲೋಕ ಚೈತ್ರಧಾರೆ
ಸೀಳುವಂಥ ರಭಸ ತೋರೆ
ಫಾಲನೇತ್ರ ತನ್ನ ಜಟೆಯಲಾಧರಿಸಿರಲು|
ತಾಳಿ ಸೌಮ್ಯ ನಡೆಯ ಹಿಮದ
ಮೇಲಿನಿಂದ ಶ್ವೇತ ಧಾರೆ
ಶೂಲಿ ಪದವ ಚುಂಬಿಸುತ್ತ ಮೆಲ್ಲನಿಳಿದಳು.||

ಸಗರ ಸುತ ಸಹಸ್ರಕೆಲ್ಲ
ಸೊಗದಿ ಮುಕ್ತಿ ನೀಡಲೆಂದೆ
ಸಗರ ಪೌತ್ರ ಯತ್ನ ಫಲದಿ ಭುವಿಗೆ ಒಲಿದಳು|
ಅಗಣಿತ ಸಮೃದ್ಧಿಯನ್ನು
ಮೊಗೆದು ಕೊಡುತ ಸಾಗಿ ಬರಲು
ಮೊಗೆದು ಕುಡಿದ ಜಹ್ನು ತನ್ನ ಮನೆಯೆ ಹರಿಯಲು||

ಮನವನೊಲಿಸೆ ಸಗರ ಪೌತ್ರ
ಗುಣಿಯು ಜಹ್ನು ಕರುಣಿಸಿದನು
ಜನರಿಗೆಲ್ಲ ಮುದವ ಕೊಡಲು ತನ್ನ ಕಿವಿಯಲು.|
ಇನಿದನಿಯಲಿ ಹರಿಯುತಿರುವ
ಕಣಜಗಳನು ತುಂಬುತಿರುವ
ಮನುಜ ಪಾಪ ಭಂಗ ವಂಗ ನಾಡವರೆವಿಗೂ.||

ಸರ್ವ ಋತುಗಳಲ್ಲಿ ತುಂಬಿ
ಪರ್ವಗಳಲಿ ಪೂಜೆಗೊಂಡು
ನಿರ್ವಹಿಸುತ ಕೃಷಿಗೆ ನೀರ ಪೂರಣೆಯನ್ನು|
ಶರ್ವ ಪ್ರೀತೆ ಹರಿಯ ಸುತೆಯ
ಳೀರ್ವರ ದೇಗುಲಕೆ ತಂತು 
ಸರ್ವರಿಂದ ನುತಿಸಿ ಕೊಂಬ ಭೀಷ್ಮ ಮಾತೆಯು.||


ಸುಬ್ರಹ್ಮಣ್ಯ ಬರ್ವೆ ಎಂ.








ಶಿವಾಪರಾಧ ಕ್ಷಮಾಪಣ ಸ್ತೋತ್ರದ ಕನ್ನಡ ಅನುವಾದ

ಶ್ರೀ ಆದಿ ಶಂಕರಾಚಾರ್ಯರ ಶಿವಾಪರಾಧ ಕ್ಷಮಾಪಣ ಸ್ತೋತ್ರದ ಕನ್ನಡ ಅನುವಾದದ‌ಯತ್ನ. ತಪ್ಪುಗಳಿದ್ದರೆ ಕ್ಷಮಿಸಿ, ಹರಸಿ. ಶಿವ ಶಿವ ಶಿವ ಭೋ  ಅಣು ರೂಪದಿಂದಣುಗನಾಗಿ ಬಪ್ಪ ಮೊದಲ...