ಶುಕ್ರವಾರ, ಆಗಸ್ಟ್ 19, 2022

ವೇಷ ಲೇಖನ ಸರಣಿ ಭಾಗ ೪

#ವೇಷ 

ಭಾಗ ೪.

ಮೊನ್ನೆ ಹೇಳಿದ್ನಲ್ಲ?… ಊರು ಮುಳುಗಿಸುವಷ್ಟು ನೀರು… ಆ ನೀರು ಊರು ಮುಳುಗಿಸಿತು. ಆಗಲೇ ಕಡತಗಳೆಲ್ಲಾ ನೀರಲ್ಲಿ ಕೊಚ್ಚಿ‌ಹೋಯಿತು.  ಆಗ ಬ್ರಹ್ಮ ಅರ್ಜೆಂಟಲ್ಲಿ‌ ಒಂದು ಪುಸ್ತಕ ತೆಗೆದು ಕಂಕುಳಲ್ಲಿ ಇರಿಸಿಕೊಂಡ. ನಮ್ಮ‌ ಜನರಾದರೆ ಏನ್ ಮಾಡ್ತಾರೆ ಹೇಳಿ? ನೆರೆ ಬಂದ್ರೆ, ದುಡ್ಡಿನ ಚೀಲ ಮೊದಲಿಗೆ ತೆಗೆದಿಡುತ್ತಾರೆ. ಅದೇ ನೋಡಿ ನಾವು‌ ಹೀಗಿರೋದು. ಮಕ್ಕಳ ಶಾಲೆಯ ಪುಸ್ತಕಕ್ಕೂ ನಂತರದ ಆದ್ಯತೆ.

ಬ್ರಹ್ಮ ತೆಗೆದಿಟ್ಟ ಪುಸ್ತಕ ಅಂತಿಂಥದ್ದಲ್ಲ. ವೇದ.  ಅದೊಂದಿದ್ದರೆ ಎಲ್ಲ ಪುನಃ ಸೃಷ್ಟಿ ಮಾಡಬಹುದು ಎಂಬ ವಿಶ್ವಾಸ ಅವನಿಗೆ. ಅದು ದಿತಿಯ ಮಗ ತಮನಿಗೆ ತಿಳಿಯಿತು. ಆ ಪುಸ್ತಕ ಕಿತ್ತುಕೊಂಡು ತನ್ನ ಮನೆ ಅಟ್ಟದಲ್ಲಿ ಇಟ್ಟ. ಅವನಿಗೂ ಒಂದು ಆಸೆ ಇಡೀ‌ಜಗತ್ತನ್ನು ಜ್ಞಾನದ ಬಲದಿಂದ ಆಳಬೇಕು ಅಂತ. ಪುಸ್ತಕ ಕದ್ದವರಿಗೆಲ್ಲ ಜ್ಞಾನ ಒಲಿಯುತ್ತದೆಯೇ? ಅವನ ಮನೆ ಪಾತಾಳದಲ್ಲಿ ಇತ್ತಂತೆ.  ಆ ಪುಸ್ತಕದಲ್ಲಿದ್ದ ವಿದ್ಯೆ, ಜ್ಞಾನವೆಲ್ಲ ತಮನ ಪಾಲಾದರೆ ಎಲ್ಲ ಅಧ್ವಾನ ಮಾಡುತ್ತಾನೆ ಅಂತ ಎಲ್ಲರೂ ಹೆದರಿದರು. ಒಂದು ಧೈರ್ಯ ಅಂದರೆ ಒಮ್ಮೆ ಓದಿದರೆ ಅರ್ಥವಾಗದಂಥ ಪದಪುಂಜಗಳಲ್ಲಿ ಬರೆಯಲಾಗಿತ್ತು ವೇದ. ಮತ್ತೆ ಮತ್ತೆ ಓದಿದಾಗ ಬಾಯಿಪಾಠ ಮಾಡಿದಾಗ ಅದರ ಅರ್ಥ ತಿಳಿಯುವುದು ಅಂತ ಅಲ್ಲ, ಆದರೆ ಹೊಸ ಜ್ಞಾನ ಸ್ಫುರಣೆಯಾಗುತ್ತದೆ. ಅಂಥ ಕೋಡೆಡ್ ಭಾಷೆಯಲ್ಲಿ ಬರೆದ ವೇದಗಳನ್ನು ತಮ ಅಷ್ಟು ಬೇಗ ಅರ್ಥಮಾಡಿಕೊಳ್ಳಲಾರ ಎಂಬ ಧೈರ್ಯ. ಆದರೂ ಬೇಗ ತರಬೇಕಲ್ಲಾ? ಎಲ್ಲರೂ ಜಗತ್ತಿನ‌ ಚೌಕೀ ಮನೆ ವೈಕುಂಠಕ್ಕೆ ಬಂದರು. ನೆನಪಿಡಿ, ಸುತ್ತ ಎಲ್ಲ‌ ನೀರೇ.  ಏನಾದ್ರೂ‌ ಮಾಡಿ ಪುಸ್ತಕ ತಂದುಕೊಡು ದೇವ್ರೇ ಅಂತ ಬ್ರಹ್ಮ‌ ಗೋಗರೆದ.

ವಿಷ್ಣು ವೇಷಕ್ಕೆ ಕೂತ. ಮೀನಿನ ರೆಕ್ಕೆ ಕಿವಿರು‌ ಎಲ್ಲ‌ ಕಟ್ಟಿಕೊಂಡ. ಕಟ್ಟಿಕೊಂಡದ್ದೋ ಹುಟ್ಟಿಕೊಂಡದ್ದೋ ಅಂತ ಗೊತ್ತಾಗದಂಥ ನಾಜೂಕು. ಅಂಥಾ ಚಾಕಚಕ್ಯತೆ ವೇಷದಲ್ಲಿ. ವೇಷ ಮಾಡಿದ್ರೆ ಹಾಗೆ ಮಾಡ್ಬೇಕು. ಮುಖಕ್ಕೆ ಬಣ್ಣ ಬೇಕೂಂತ ಇಲ್ಲ. ನೀರಿನಲ್ಲೇ ಇಳಿಯಬೇಕಾದ ಮೀನು ಅಲ್ವಾ. 

ರಭಸದಿಂದ ಇಳಿದು ಪಾತಾಳಕ್ಕೆ ಹೋಗಿ ತಮನಿಂದ ಪುಸ್ತಕ ತಂದು ಬ್ರಹ್ಮನಿಗೆ ಕೊಟ್ಟ. ತಮನನ್ನು ಕೊಂದ. 

ತನ್ನ ಮಗನನ್ನು ಕೊಂದನಲ್ಲಾ ಅಂತ ದಿತಿಗೆ ಕೋಪ. ಯಾರಮೇಲೆ ಅಂತ ಇಲ್ಲ ಒಟ್ಟು ಕೋಪ. ತನ್ನ ಮಗ ತಮ ಮಾಡಿದ್ದು ಸರಿಯಿಲ್ಲ ಎಂಬ ಅರಿವು ಒಳಗೊಳಗೆ ಅವಳಿಗೂ ಇತ್ತು. ಆದರೆ ಒಪ್ಪಿಕೊಳ್ಳಲು ಅದಿತಿಯ ಮೇಲಿನ ಕಿಚ್ಚು ಬಿಡಬೇಕಲ್ಲ.. ಕಶ್ಯಪರು ಅದಿತಿಯ ಮಕ್ಕಳನ್ನೇ ರಕ್ಷಿಸೋದು ಅಂತ ಅವರ ಮೇಲೂ ಸಿಟ್ಟು.

ಒಟ್ಟು ತಲೆ ಕೆಟ್ಟಿತ್ತು. ಕಶ್ಯಪರದ್ದು ಮುಗಿಯದ ಅನುಷ್ಠಾನ. ಒಂದು ಮುಗಿದ ತಕ್ಷಣ ಇನ್ನೊಂದು. ಬ್ರಹ್ಮ ಕೊಟ್ಟ ಸೃಷ್ಟಿ ಕಾರ್ಯ ಬರೇ ಅದಿತಿಯ ಮೂಲಕ ಮಾತ್ರ ಆದರೆ ಸಾಕೆ? ಇನ್ನುಳಿದವರಿಗೂ ಸಂತಾನ ಬೇಡವೇ?  ಕಾದು ಕಾದು ಹೊತ್ತಲ್ಲದ ಹೊತ್ತು ಮುಸ್ಸಂಜೆಯಲ್ಲಿ ಹೋಗಿ ತನ್ನ ಕಷ್ಟ ಹೇಳಿಕೊಂಡಳು. ತನ್ನ ಮಕ್ಕಳೆಲ್ಲಾ ಕೊಲೆಯಾದರು ಹೀಗೆ ಆದರೆ ತನ್ನ ಹೆಸರು ಹೇಳಲು ಯಾರೂ ಉಳಿಯುವುದಿಲ್ಲ ಇತ್ಯಾದಿ ಇತ್ಯಾದಿ. 

ನಮ್ಮ ಯಕ್ಷಗಾನದಲ್ಲಿ, ಯಾವುದನ್ನು ಹೇಳದೇ ಹೇಳಿಬಿಡಬೇಕೋ, ಅಂಥ ಸನ್ನಿವೇಷ ಬಂದಾಗ ಪರದೆ ಎಳೆದರೆ ಸೈ. ಹಾಗೆ ಈಗ ಪರದೆ ಎಳೆದುಬಿಡೋಣ.‌

ದಿತಿ ದೇವಿಯ ಹಟ ಗೆದ್ದಿತು. ಗರ್ಭಿಣಿಯಾದಳು. ಅವಳಿ ಮಕ್ಕಳನ್ನು ಹಡೆದಳು. ಪರದೆ ಎತ್ತಿದಾಗ ನಮ್ಮ‌ ಪುಂಡುವೇಷದವರ ಜೋಡಿ ರಾಕ್ಷಸ ವೇಷ. ಉತ್ಪಾತ ನೋಡಬೇಕು. ನಾಯಿಗಳು ಊಳಿಟ್ಟುವಂತೆ, ಉಲ್ಕಾಪಾತವಾಯಿತಂತೆ, ನೆರೆ ಬಿರುಗಾಳಿಗಳು ಬಂದವಂತೆ. ಈಗಿನ ಜನ ಕೇಳುವುದಿಲ್ಲ. ಇಲ್ಲದಿದ್ದರೆ ಮುಸ್ಸಂಜೆ ಹೊತ್ತು ಅಥವಾ ಮನೆಗಳಲ್ಲಿ ದೀಪ ಹಚ್ಚುವ ಹೊತ್ತು ಎಲ್ಲೂ ಹೊರಗಡೆ ತಿರುಗಾಡಬಾರದು, ಶಿವ ಪ್ರಪಂಚ ಸಂಚಾರ ಮಾಡುವ ಹೊತ್ತು ಅಂತ ಹೇಳ್ತಾರೆ. ಅಂಥ ಹೊತ್ತಿನ ಆಸೆಯಿಂದ ಆದ ಅನರ್ಥ ಉತ್ಪಾತಗಳೇ ಆದುವು.

ಎಲ್ಲವನ್ನು ಸಾಂಕೇತಿಕವಾಗಿ ತೋರಿಸಬೇಕಲ್ಲಾ? ಆಗ ಸಹಾಯಕ್ಕೆ ಬರುವುದು ದೊಂದಿ, ರಾಳದ ಪುಡಿ, ಚಂಡೆಯ ಗದ್ದಲ.  

ಈ ದಿತಿಯ ಮಕ್ಕಳು ಹುಟ್ಟಿದ ತಕ್ಷಣ ಮೇಲೆ ನೋಡುವುದು. ದೇವತೆಗಳು ಇದ್ದಾರಲ್ಲಾ? ಅವರಿದ್ದ ಮಟ್ಟಕ್ಕೆ ಏರುವ ಯೋಚನೆಯಿಲ್ಲದಿದ್ದರೂ ಅವರನ್ನು ಕಾಲು ಎಳೆದು ಕೆಳಗೆ ಬೀಳಿಸುವ ಯೋಚನೆ ಇದೆ. ದೇವೇಂದ್ರ ದೇವಪೀಠಕ್ಕೇರಲು ನೂರು ಆಶ್ವಮೇಧ ಮಾಡಿ ಕಷ್ಟ ಪಟ್ಟು ಮೇಲೆ ಬಂದವನು.  ದೈತ್ಯರು ರಟ್ಟೆಯ ತ್ರಾಣದಿಂದ ಒಮ್ಮೆ ಪುರಂದರನನ್ನು ಕೆಳಗಿಳಿಸಿದರೂ  ಆ ಪಟ್ಟ ಶಾಶ್ವತವಾಗಿ ಅವರಿಗೆ ಆಗುವುದು ಸಾಧ್ಯವಿಲ್ಲ. 

ಈ ಬಾರಿ ದಿತಿ ದೇವಿ ಬಡ ಪೆಟ್ಟಿಗೆ ಬಿಡುವಂತೆ ಕಾಣುತ್ತಿಲ್ಲ. ಹಾಗೇ ಏರಬೇಡಿ. ತಪಸ್ಸು ಮಾಡಿ, ತಾಲೀಮು ಮಾಡಿ ಅಂತೆಲ್ಲ ತಾಕೀತು ಮಾಡಿ ಕಾಡಿಗೆ ಕಳಿಸಿದಳು.

ತಪಸ್ಸಿಗೆ..

ಇವತ್ತಿಗೆ ಸಾಕು. ನಾಳೆ ನೋಡುವಾ.

ಸುಬ್ರಹ್ಮಣ್ಯ ಬರ್ವೆ ಎಂ.

ಬುಧವಾರ, ಆಗಸ್ಟ್ 17, 2022

ವೇಷ ಲೇಖನ ಸರಣಿ ಭಾಗ 2.

 ಚೌಕಿ ಮನೆಯಿಂದ ವೇಷ ರಂಗಕ್ಕೆ ಕಳಿಸುವುದೆಂದರೆ ಭೋಜನ‌ಕೂಟಗಳಲ್ಲಿ ಅಡುಗೆಯನ್ನು ಸರತಿಯಂತೆ ಪಂಕ್ತಿಗಳಿಗೆ ಕಳಿಸಿದಂತೆ.‌ ಎಲೆ ಹಾಕಿ ಮೊದಲಿಗೆ ತೆಗೆದುಕೊಂಡು ಹೋಗುವುದೇನು? ನೀರು. ಜಗತ್ತಿಗೂ ಹಾಗೆಯೇ. ಭಗವಂತ ಮೊದಲು‌ ಕೊಟ್ಟದ್ದು ನೀರನ್ನಂತೆ. ಜೀವ ದ್ರವ. ಜೀವಗಳ ಬೆಳವಣಿಗೆಗೆ ಮೂಲ. ಮೊಟ್ಟೆಯನ್ನು ಒಡೆದು ನೋಡಿದರೂ ಒಳಗಿರುವ ಭ್ರೂಣ ದ್ರವದಲ್ಲಿ ತೇಲಾಡುತ್ತಿರುತ್ತದೆ. ಇಷ್ಟು ಪುಷ್ಟಿ ಸಾಕಲ್ಲ? ನೀರಿನಲ್ಲೇ ಅಂತೆ ಹಿಂದೆ ಇದ್ದ ಜೀವಗಳು ವಸ್ತುಗಳು ಮುಳುಗಿದ್ದು. ಇಡೀ ವಿಶ್ವದಲ್ಲಿ ನೀರೋ ನೀರು. ಲೆಕ್ಕ ಪತ್ರಗಳು, ಪಾಪ ಪುಣ್ಯದ ಲೆಕ್ಕ ಎಲ್ಲ ಕೊಚ್ಚಿ ಹೋಯಿತು. ಜೀವರೆಲ್ಲ ನಾಶವಾದರೆಂದ ಮೇಲೆ ಲೆಕ್ಕ ಮಾತ್ರ ಇಟ್ಟುಕೊಂಡು ಏನು ಮಾಡುವುದು?

ಆಗ ಜಗತ್ತಿನ ತಾಯಿ‌ ಸೃಷ್ಟಿಗೆ ಒಂದು ಮೂರ್ತ ರೂಪ ಕೊಟ್ಟಿದ್ದಿರಬೇಕು.‌ ಅದನ್ನು ಬ್ರಹ್ಮ ಎನ್ನೋಣ. ಅವನ ನೆನಪಿನ‌ ಚಿಪ್ಪಿನಲ್ಲಿ, ಸುಲಭದಲ್ಲಿ ಅರ್ಥವಾಗಬೇಕಾದರೆ memory card ನಲ್ಲಿ ಹಿಂದೆ ಇದ್ದ ಎಲ್ಲ ಸೃಷ್ಟಿಯ ನೀಲಿ ನಕಾಶೆ, ಅಥವಾ ನಮೂನೆಗಳು ನಿಕ್ಷೇಪವಾಗಿದ್ದುವು. ಅವೆಲ್ಲ ಬ್ರಹ್ಮನ ಹೊಟ್ಟೆಯಲ್ಲಿತ್ತು ಎಂದು ಸರಳವಾಗಿ ಹೇಳಬಹುದೇನೋ?! ಇಷ್ಟೆಲ್ಲ ತನ್ನಲ್ಲಿ ಇದೆ ಎಂದು ತಿಳಿದದ್ದೇ ತಡ. ಅವನ ತಲೆಗೇರಿತು. ತಾನೇ ದೊಡ್ಡವ ಎಂಬ ಅಹಂ ಭಾವ. ಅದನ್ನು ನಾವೆಲ್ಲಾ ದೇವೀ ಮಹಾತ್ಮೆಯ ಆಟಗಳಲ್ಲಿ ಸಾಕಷ್ಟು ಬಾರಿ ನೋಡಿದ್ದೇವೆ. ಆಗ ನಮ್ಮ ಭಗವಂತ, ಮೇಲು ಕೀಳು ಎಲ್ಲ ಮನಸ್ಸಿನ ಭಾವನೆ ಅಷ್ಟೇ, ನಿಜವಾಗಿ ಎಲ್ಲವೂ ಸಮಾನವೇ, ಶ್ರೇಷ್ಠವೇ ಎಂದು ತಿಳಿ ಹೇಳಿದ. ಅದನ್ನು ತೋರಿಕೊಡಲು ಅವನು ಹೊರಬರಲು ಆಯ್ಕೆ ಮಾಡಿದ್ದು ಬ್ರಹ್ಮನ ದೇಹದ ಅಧೋದ್ವಾರ.
ತುಂಬಿದ ಕೊಡ ತುಳುಕುವುದಿಲ್ಲ ನೋಡಿ! ಇದನ್ನು ಹೇಳಲೂ ನೀರೇ ಬೇಕು. ಇನ್ನೂ ಬೇಕೋ? ಸಾಗರವೂ ಹಾಗೆಯೇ. ತೆರೆಗಳು ತೀರಗಳಲ್ಲಿ ಮಾತ್ರ. ಆಳ ಸಮುದ್ರದಲ್ಲಿ ನಿತ್ಯ ನೀರವ, ಗಂಭೀರ ಮೌನ. ಹಾಗೆಂದು ಅದೂ ಕದಡುವುದಿಲ್ಲ ಎಂದಲ್ಲ. ಪ್ರಳಯ ಸದೃಶವಾದ ಹೆದ್ದೆರೆಗಳು ಬಂದಾಗ ಅಲ್ಲೂ‌ ಅಲ್ಲೋಲಕಲ್ಲೋಲ‌ ಆಗಬಹುದು.
ಇಲ್ಲಿ ನನ್ನ ಈ ಕೆಳಗಿನ ಅಪ್ರಕಟಿತ ಮುಕ್ತಕ ಪ್ರಸ್ತುತ ಎನ್ನಿಸೀತು.
ತುಂಬಿರುವ ಕೊಡವನ್ನು ಹೊರುವುದಸದಳವಲ್ಲ
ಅಂಬುಧಿಯ ನಡುವ ಜಲ ಶಾಂತವಲ್ತೆ??
ತುಂಬದಿಹ‌ ಘಟಕೇನು ಡೌಲು ಡಂಭಕ ಗೊತ್ತೆ
ಅಂಬುಧಿಯ ತಟ ತೆರೆಯು ಗುರುನಾಥನೇ||೨೧||
ವಿಷ್ಣುವಿನ ಹೊಟ್ಟೆ ಹೊಕ್ಕಾಗಲೇ ಬ್ರಹ್ಮನಿಗೆ ಅರಿವಾದುದು, ತಾನೇನೂ ದೊಡ್ಡ ಸಂಗತಿಯಲ್ಲ ಎಂದು. ಹೊರಬರಲು ದಾರಿ ಹುಡುಕಿದ್ದೇ ಹುಡುಕಿದ್ದು. ಮೇಲಕ್ಕೆ ಹೋದಷ್ಟೂ ಮುಗಿಯದ ಆಯ ಆಕೃತಿ. ಇದು ಅಗದು ಅಂದುಕೊಂಡು ಕೆಳಗಿಳಿದರೆ ಕೆಳಗೂ ಮುಗಿಯದ ಪ್ರಪಾತ. ಒಂದು ಕ್ಷಣ ಮೇಲಾವುದು ಕೆಳಗಾವುದು ಎಂದೂ ಅರಿಯದ ಸ್ಥಿತಿ ಬಂದಾಗ ಭಗವಂತನ ಸ್ಮರಣೆ ಅವನ ನಾಲಿಗೆಯಲ್ಲೂ ಬಂತಂತೆ. ಆಗ ಹೊಕ್ಕುಳಿಂದ ಹೊರಬಂದದ್ದು ನಾವೆಲ್ಲಾ ಚಿತ್ರಗಳಲ್ಲಿ ಮತ್ತೆ ಆಟದಲ್ಲಿ ನೋಡಿದ್ದೇವೆ.
ಇರಲಿ, ಜ್ಞಾನೋದಯ ಪ್ರತಿಯೊಬ್ಬರಿಗೂ ಆಗುತ್ತದೆ. ಯಾವಾಗ ಆಯಿತು, ಎನ್ನುವುದರಿಂದ ಅವರ ಉದ್ಧಾರ ಮತ್ತು ಪತನಗಳು ನಿರ್ಣಯವಾಗುತ್ತವೆ.
ಮೊದಲು ಹೇಳಿದ ಪುಂಡುವೇಷಗಳು ಇವೆಯಲ್ಲ? ಅವರಿಗೆ ನಾಳೆಯಿಂದ ಬೇಡ ಅಂತ ಹೇಳಿದ ಕೂಡಲೇ ಆಗಿತ್ತಂತೆ ಜ್ಞಾನೋದಯ. ಅದರೆ ನಿರ್ಣಯದಿಂದ‌ ಹಿಂದೆ ಸರಿಯುವುದಿಲ್ಲ, ಭಗವಂತ. ಭಕ್ತರ, ಅಭಿಮಾನಿಗಳ ಬೇಡಿಕೆಯ ಮೇರೆಗೆ ತಾನೇ ಎಲ್ಲ ನಡೆಯುವುದು? ಅಂತೂ ಮೇಳ ಬಿಟ್ಟರು. ನಿಮಗೆ ಗೊತ್ತಾಯ್ತಾ?? ಅ ಪುಂಡರು ಜಯ ವಿಜಯರು. ಆಭಿಮಾನಿಗಳು ನಾಲ್ಕು ಜನ ಸನಕಾದಿ ಮುನಿಗಳು. ಆಗಲೇ ಅಯ್ಕೆ ಸಿಕ್ಕಿತ್ತಂತೆ, ಕಡಿಮೆ ಕಷ್ಟವೆನ್ನಿಸುವ ಏಳು ಜನ್ಮವೋ? ಅಥವಾ ಹೆಚ್ಚು ಕಷ್ಟ ಪಡುವ ಇತರರಿಗೂ ಕಷ್ಟವನ್ನೇ ಉಂಟುಮಾಡುವ ಮೂರೋ? ಎಂದು. ಇವರು ಬೇಗ ಬರಬೇಕಲ್ಲಾ ಅದಕ್ಕೆ ಮೂರು ಅಂದರು.‌
ಇವರು ಯಾವ ಮೇಳ ಸೇರಿದರು? ವೇಷ ಹೇಗಿತ್ತು? ಮತ್ತೆ ನೋಡುವಾ .. ಆಯ್ತಾ !
ನಮಸ್ಕಾರ
ಸುಬ್ರಹ್ಮಣ್ಯ ಬರ್ವೆ ಎಂ.

ಮಂಗಳವಾರ, ಆಗಸ್ಟ್ 16, 2022

ವೇಷ- ಲೇಖನ ಸರಣಿ ಭಾಗ 1

 ವೇಷ.

ನಿಜವಲ್ಲ, ಹೌದು ವೇಷವೇ. ರಾತ್ರಿಯಿಡಿ ಕುಪ್ಪಳಿಸಿ ತಕಧೀಂ ಎಂದು ಕುಣಿದು ಮಾತಾಡಿ, ಬೆಳಗಿನ ಜಾಮ ಬರುವಾಗ ಕಾಲುಗಳ ಗಂಟೆಲ್ಲಾ ನೋವು. ಆರಂಭದಲ್ಲಿದ್ದ ಲವಲವಿಕೆ ಗಂಟೆಗಳು ಕಳೆದಂತೇ ಕಡಿಮೆಯಾಗುತ್ತಾ ಹೋಗುತ್ತದೆ. ಬೆಳಗಿನ ಜಾಮ ಬಂದಾಗ 'ಒಮ್ಮೆ ಮುಗಿದರೆ ಸಾಕು' ಎಂಬ ವೈರಾಗ್ಯದ ಮನ ಎಲ್ಲಾ ಕಲಾವಿದರಿಗೆ. ಅದರೆ ಮರುದಿನ ಪುನಃ ಇಮ್ಮಡಿ ಆಸಕ್ತಿ. ಸ್ವಲ್ಪ ಅಮೃತಾಂಜನವೋ, ನೋವಿನ ಎಣ್ಣೆಯೋ ಹಚ್ಚಿದಾಗ ತುಸು ಆರಾಮ ಸಿಕ್ಕ ಭ್ರಮೆಯೋ, ಭಾವನೆಯೋ ಮೂಡುತ್ತದೆ.
ಚುಮುಚುಮು ಬೆಳಗಾಗುತ್ತಿರುವಂತೇ, ಒಬ್ಬೊಬ್ಬರೇ ವೇಷ ಕಳಚಿ ದೊಗಲೆ ಪಂಚೆಗಳನ್ನು ತಮ್ಮ ತಮ್ಮ‌ ಹೆಸರಿನ ಪೆಟ್ಟಿಗೆಗಳಲ್ಲಿ ತುಂಬಿ, ಬಣ್ಣವನ್ನು ತೆಗೆಯುತ್ತಾರೆ. ಆದರೂ ಕಿವಿಯ ಹತ್ತಿರ, ಹುಬ್ಬುಗಳಲ್ಲಿ ಸ್ವಲ್ಪ ಉಳಿದುಹೋಗುತ್ತದೆ. ನುರಿತ ಕಲಾವಿದರು ಬಣ್ಣದ ಲವ ಲೇಶವೂ ಉಳಿಯದಂತೆ ತೆಗೆಯುತ್ತಾರೆ. ಮೊನ್ನೆ ಮೊನ್ನೆ ಸೇರಿದ ಹುಡುಗರು ಅನುಭವವಿಲ್ಲದೆ, ಹೇಗೆ ತೆಗೆಯಬೇಕೆಂದು ತಿಳಿಯದೇ ಇಡೀ ಮುಖಕ್ಕೇ ಎಣ್ಣೆ ಹಚ್ಚಿ ಮುಖ‌ ಕಪ್ಪು ಮಾಡಿಕೊಳ್ಳುತ್ತಾರೆ.‌ ಮತ್ತೆ ಬಣ್ಣ ತೆಗೆಯಲು ಸೀಗೆ ಪುಡಿಯೋ ಶಾಂಪೂವೋ ಬೇಕಾಗುತ್ತದೆ.
ಬೇಸಿಗೆಯಲ್ಲಿ ಇನ್ನೂ ಕಷ್ಟ. ವೇಷ ತೆಗೆಯುವ ಮೊದಲೇ ಬಣ್ಣ ಕದಡಲು ಪ್ರಾರಂಭವಾಗುತ್ತದೆ. ಈ ವೇಷ ಗೀಷ ಬಿಟ್ಟು ಮನೆಯಲ್ಲಿ ಮುಸುಕು ಹಾಕಿ ಮಲಗಿಬಿಡಬೇಕು ಅಂತ ಅನ್ನಿಸುತ್ತದೆ. ಆದರೆ ಆಸಕ್ತಿ ಬಿಡಬೇಕಲ್ಲಾ!!
ಏಳು ಗಂಟೆಗೆ ಸಾಯಂಕಾಲವೇ ಗುಡುಗುಡುಗುಡು ಎಂದು ಜನರೇಟರ್ ಸ್ಟಾರ್ಟ್ ಮಾಡುತ್ತಾರೆ. ನಿಲ್ಲುವುದು ಬೆಳಿಗ್ಗೆಯೇ. ಕಲಾವಿದರಿಗೆ, ಪ್ರೇಕ್ಷಕರಿಗೆ ಹೇಗೂ ಇಲ್ಲವಲ್ಲ; ಅಕ್ಕಪಕ್ಕದವರಿಗೂ ನಿದ್ದೆ ಇಲ್ಲ. ಇದು ದಿನ ನಿತ್ಯದ ದೃಶ್ಯ.
ಮೊನ್ನೆ,
ಚೌಕಿ ಮನೆಯಲ್ಲಿ ಅಬ್ರತಾಳ ಬೀಳುತ್ತಿದ್ದಾಗ ಏನೋ ಗುಸುಗುಸು ಆರಂಭವಾಯಿತು. ಏನು ಎಂದು ಅಕ್ಕಪಕ್ಕದವರಿಗೆ ಗೊತ್ತಾಗಲಿಲ್ಲ. ಭಾಗವತರಿಗೆ, ಮತ್ತು ಮುಖ್ಯ ಸ್ತ್ರೀವೇಷದವರಿಗೆ ಮಾತ್ರ ಗೊತ್ತಾಯಿತು. ಭಾಗವತರ ಅಭಿಮಾನಿಗಳು ಯಾರೋ ನಾಲ್ಕು ಜನ ಅವರನ್ನು ಭೇಟಿಯಾಗಲು ಬಂದಿದ್ದರು. ಅವರನ್ನು ಈ ಪುಂಡುವೇಷದವರು ಇಬ್ಬರು ಚೌಕಿಯ ಬಾಗಿಲಲ್ಲೇ ತಡೆದರು.
ಬಾಗಿಲು ಅಂದರೆ ಮರದ್ದೇನೂ ಅಲ್ಲ. ರಂಗದ ಮೇಲೆ ಸ್ವಲ್ಪ ಜಾಗದಲ್ಲೇ ಸರೋವರ, ಅರಮನೆ ಎಲ್ಲಾ ಬರುವಂತೆಯೇ ಕಾಲ್ಪನಿಕ. ಒಂದು ಪರದೆ. ಅದನ್ನು ದಾಟಿ ಬರಬಾರದೆಂಬ ನಿಯಮ ಗೊತ್ತಿದ್ದರೆ ಅಷ್ಟೇ ಸಾಕಾಗುತ್ತದೆ. ಅದೂ ಬೇಡ! ಒಂದು ಗೆರೆಯೂ ಸಾಕಾಗುತ್ತದೆ.
ಈ ಪುಂಡು ವೇಷದವರಿಗೆ ತಮ್ಮನ್ನು ಬಿಟ್ಟರೆ ಈ ಮೇಳಕ್ಕೆ ಗತಿಯಿಲ್ಲ ಎಂಬ ಜಂಭ. ತೀವ್ರ ಗತಿಯ ಪದ್ಯಗಳಿಗೆ ಸ್ಟೇಜ್ ಹುಡಿ ಮಾಡುವಂತಹ ಪದ ಸಂಚಾರ ಮಾಡಿ ಪ್ರೇಕ್ಷಕರನ್ನು ಹುಚ್ಚುಗಟ್ಟಿಸುವ ಬಿಸಿ ರಕ್ತ. ಸರಿ… ತಡೆದರು.
"ನಾವೇನೂ ನಿಮ್ಮ ಭಾಗವತರನ್ನು ಕರಕೊಂಡು ಹೋಗಲೋ, ಮರುಳು ಮಾಡಲೋ ಬರಲಿಲ್ಲ. ಅವರ ಹತ್ರ ಎರಡು ನಿಮಿಷ ಮಾತಾಡುವ ಅವಕಾಶ ಸಾಕು''
ಇವರ ಧಿಮಾಕು ನೋಡಿ!
"ಭಾಗವತರ ಹತ್ತಿರ ಏನು ಹೇಳಬೇಕೋ ಅದನ್ನು ನಮ್ಮಲ್ಲೇ ಹೇಳಿ, ಆಮೇಲೆ ನಾವೇ ತಲುಪಿಸ್ತೇವೆ, ಪುರ್ಸೋತ್ತು ಆದಾಗ" ಅಂತ ಗದರಿ ಅವರನ್ನು ಅತ್ತ ಕಳಿಸಿದರು.
ಆ ಮೇಲೆ ಏನಾಯಿತೋ ಏನೋ! ಮಾರನೇ ದಿನ ಈ ಪುಂಡುವೇಷದ ಪುಂಡರಿಗೆ ಮೇಳದಲ್ಲಿ ಅವಕಾಶ ಇಲ್ಲ ಅಂತ ಭಾಗವತರೇ ತಡೆದರು.
"ನಿಮಗೆ ಇನ್ನು ಮೂರು ವರ್ಷ ನಮ್ಮಲ್ಲಿ ಅವಕಾಶ ಇಲ್ಲ. ಅಭಿಮಾನಿಗಳ ಬಗ್ಗೆ ತಾತ್ಸಾರ ಮಾಡಿದ್ರಲ್ಲ! ನಿಜವಾಗಿ ಈ ಮೇಳ ನಿಮ್ಮಿಂದ ನಡೆಯುವುದಲ್ಲ, ಅದು ನಡೆಯುವುದು ಅಭಿಮಾನಿಗಳಿಂದ. ಮೂರು ವರ್ಷ ಹೋಗಿ ಕಷ್ಟ ಏನು‌ ಅಂತ ತಿಳಿದು ಬನ್ನಿ'' ಅಂತ ಕಳಿಸಿದರು.‌
ಈ ಪುಂಡುವೇಷದವರಿಗೆ ನಮ್ಮ ವೇಷ ಮಾತ್ರ ಪುಂಡು, ಆದರೆ ನಾವೂ ಪುಂಡರಲ್ಲ, ಅನ್ನುವ ಅರಿವು ಮರೆತಾಗ ಪುಂಡತನ ವೇಷ ಕಳಚಿದಾಗಲೂ ಉಳಿದು ಹೋಗುತ್ತದೆ. ಅದು ಹಾಗೆ ಉಳಿಯದ ಸ್ಥಿತಿ‌ ಬರುವ ತನಕ ವೇಷ ಮಾಡುತ್ತಲೇ‌ ಇರಬೇಕು.
ಇವರ ಪುಂಡು ವೇಷವೇನೂ ಮಹಾ ಪರಬ್ರಹ್ಮವಲ್ಲ. ಎರಡೆರಡು ಪದ್ಯ, ಅದಕ್ಕೇ ಸಿಕ್ಕಾಪಟ್ಟೆ ಕುಣಿದು ಒಂದೆರಡು ಬಾರಿ ಪ್ರವೇಶ - ನಿರ್ಗಮನ ಮಾಡಿದರೆ ಮುಗಿಯಿತು. ಮತ್ತೆ ಇಡೀರಾತ್ರೆ ಮುಸುಕು ಹಾಕಿ ಮಲಗುವುದಷ್ಟೇ.
ಈ ಮೇಳ ಬಿಡಿಸಿದರು. ಇನ್ನು ನೋಡಿ ಇವರ ಕಷ್ಟ. ಇಡಿ, ಇಡೀ ರಾತ್ರೆಯ ವೇಷಗಳು. ಮಧ್ಯೆ ನೀರು ಕುಡಿಯುವುದೂ ಯೋಚಿಸಿಯೇ ಕುಡಿಯಬೇಕು.
****
ನಮ್ಮ ವೈಕುಂಠವೂ ಹೀಗೇ ಅಲ್ವಾ?? ಇಲ್ಲಿ‌ ಭಾಗವತರದ್ದೇ ಕಾರ್ಬಾರು. ಅವರೇ ಇಡೀ ನಾಟಕದ ನಿರ್ದೇಶಕರು. ಭಗವಂತ ಅಂತಲೂ ಕೆಲವರು ತಮಾಷೆ ಮಾಡ್ತಾರೆ. ಅವರ ಜತೆ ಯಾವತ್ತೂ ಕುಳಿತು ಕಾಲೊತ್ತುವ ಕೆಲಸ ಮುಖ್ಯ ಸ್ತ್ರೀ ಪಾತ್ರಕ್ಕೆ. ಖಜಾನೆಯ ಬೀಗದ ಕೈ ಅವಳ ಹತ್ತಿರವೇ ಇರುವುದು. ಇಲ್ಲಿ ಜಾಸ್ತಿ ಜಾಗ ಇಲ್ಲ. ಇಬ್ಬರು ಕೂರುವಷ್ಟು ಮತ್ತೆ ಸ್ವಲ್ಪ‌ಜನ ನಿಲ್ಲುವಷ್ಟು ಅಷ್ಟೇ. ಹೆಚ್ಚು ಮಂದಿ ಬಂದರೆ ಇರುವವರು‌ ಹೊರಗೆ ನಡೆಯಬೇಕು. ಆದರೂ ಇಲ್ಲಿಗೇ ಬರಬೇಕು ಎಂಬುದೇ ಎಲ್ಲರ ಆಸೆ.
ಕೂತುಕೊಳ್ಳಲು ಮೆದು ಮೆದು ಹಾಸಿಗೆ. ಒಮ್ಮೊಮ್ಮೆ ಮೆದು ಹಾಸಿಗೆಯೂ ಮುಳ್ಳಾಗಿ ಚುಚ್ಚುತ್ತದಂತೆ. ಅದಕ್ಕೇ ಅದನ್ನು ಹಾವಿನ ಹಾಸಿಗೆ ಅಂತ ಹೇಳೋದು. ಅದು ಬಹುಷಃ ಹೊರಗಿನಿಂದ ಬರುವವರ ಕಾಲಿಗೆ ಅಂಟಿಕೊಂಡ ಸಣ್ಣ ಕಲ್ಲು ಮಣ್ಣು ಕೆಸರುಗಳದ್ದು ಇರಬೇಕು. ಹಾಗೆಂದು ಬರುವವರು ಕಾಲು ತೊಳೆದೇ ಒಳಗೆ ಬರಬೇಕೆಂಬ ನಿಯಮವೂ ಇದೆ. ಅದಕ್ಕೆ ನಲ್ಲಿ ನೀರಲ್ಲ. ಇಡೀ ಊರು ಮುಳುಗಿಸುವಷ್ಟು ನೀರು ತುಂಬಿ ತುಳುಕಾಡುತ್ತಾ ಇರುತ್ತದೆ. ಈ ಕಲ್ಲು ಮಣ್ಣಗಳು ಅಂದೆನಲ್ಲ! ಅದು ನೀರಿನ ಜತೆ ಸೇರಿ ಸೇರಿ ನೀರೇ ಉಪ್ಪಾಗಿ ಹೋಗಿದೆ. ಆದರೆ ಆ ರುಚಿ, ಕೊಳೆ ಕಾಲು ಹಿಡ್ಕೊಂಡು ಬಂದವರಿಗೆ ಮಾತ್ರ. ಹೊರಗೆ ಸುತ್ತಾಡಲು ಹೋದಾಗ ಅಲ್ಲಿನ ಮಣ್ಣು, ಕೆಸರು, ಇತ್ಯಾದಿ ತಾಗಿಸಿಕೊಳ್ಳದೇ ಬರುವುದನ್ನು ಅರಿತವರಿಗೆ ಈ ನೀರಿಗೆ ಹಾಲಿನ ರುಚಿ. ಆ ಕಲಿಕೆಯೇ‌ ಇಲ್ಲಿಗೆ ಬಂದು ಯಾವಾಗಲೂ ಇರಬೇಕೆನ್ನಿಸುವವರಿಗೆ ಅರ್ಹತೆ.
ಇಲ್ಲಿಯವರೆಗೆ ಬಂದ ಖುಷಿಗೆ ಕೆಲವರು ಕಾಲು ತೊಳೆಯುವ ಶಾಸ್ತ್ರ ಮಾತ್ರ ಮಾಡುತ್ತಾರೆ. ಅವರಲ್ಲಿ ಕೊಳೆಯ ಶೇಷ ಉಳಿಯುತ್ತದೆ. ಅಂತಹ ಅರ್ಧಂಬರ್ಧ ಕೆಲಸ‌ ಮಾಡುವವರು ಅವರು ಪುನಃ ಸುತ್ತಾಡಿ ಬರಬೇಕು. ಕಾಲು ತೊಳೆಯುವುದೂ ಒಂದು ಕಲೆ. ಕಾಲಿಗೆ ಕೊಳೆ ತಾಗಿಸಿಕೊಳ್ಳದಂತೇ ನಡೆಯುವುದನ್ನು ಕಲಿಯುವುದು ಇದೆಯಲ್ಲ ಅದು ವಿಶೇಷ.
ನೀರು ಹಾಲಾಗಿ, ಹಾಲು ನೀರಾಗಿ, ಯಾರಿಗೆ‌ ರುಚಿ ನೀಡುತ್ತದೋ ಅವರ ಹುಡುಕಾಟದಲ್ಲಿ‌ ಭಗವಂತ ತನ್ನ ಸಮಯ ಕಳೆಯುತ್ತಾನೆ. ಹಾಗೆ ಅನ್ನಿಸುವವರೆಗೆ ಇಲ್ಲಿಗೆ ಹೋಗಿ ಬಂದು ಮಾಡುವುದು ಅನಿವಾರ್ಯ.
ಈಗ ಆ ಎರಡು ಪುಂಡುವೇಷದವರನ್ನು ಇಲ್ಲಿಗೆ ತಂದು ನೋಡಿ! ಅವರು ಇಲ್ಲಿಗೆ ಬರುವಾಗ ಒಳಗಿನ ಚಂದ ನೋಡುತ್ತಾ ಬಂದವರು. ಆ ಉತ್ಸುಕತೆಗೆ ಕಾಲಿಗೆ ಚೂರು ಅಂಟಿದ ಕೊಳೆ ಹಾಗೇ ಉಳಿದು ಹೋಯಿತು. ಹೊರಗಿನ ಕೊಳೆ ಇಲ್ಲಿಗೆ ಹಿಡ್ಕೊಂಡು ಬಂದರೆ ತಲೆಗೇ ಹತ್ತುವುದು. ಈಗ ನೋಡಿ ಏನಾಯಿತು? ಮೂರು ಸಾರಿ ಇಲ್ಲಿಗೆ ಹೋಗಿ ಬಂದು ಮಾಡಬೇಕು. ಕೊನೆಯ ಬಾರಿ ಕೊಳೆ ಪೂರ್ತಿ ಕಳೆದರೆ ಪರವಾಗಿಲ್ಲ. ಇಲ್ಲದಿದ್ದರೆ ಮತ್ತೆ ಇಲ್ಲಿಂದ ಬಹಿಷ್ಕಾರ.
ನೀವೂ ಈ ಬಗ್ಗೆ ಯೋಚಿಸಿ.
ಮತ್ತೆ ಮಾತಾಡೋಣ.
ನಮಸ್ಕಾರ.
ಸುಬ್ರಹ್ಮಣ್ಯ ಬರ್ವೆ ಎಂ.
.

ಶಿವಾಪರಾಧ ಕ್ಷಮಾಪಣ ಸ್ತೋತ್ರದ ಕನ್ನಡ ಅನುವಾದ

ಶ್ರೀ ಆದಿ ಶಂಕರಾಚಾರ್ಯರ ಶಿವಾಪರಾಧ ಕ್ಷಮಾಪಣ ಸ್ತೋತ್ರದ ಕನ್ನಡ ಅನುವಾದದ‌ಯತ್ನ. ತಪ್ಪುಗಳಿದ್ದರೆ ಕ್ಷಮಿಸಿ, ಹರಸಿ. ಶಿವ ಶಿವ ಶಿವ ಭೋ  ಅಣು ರೂಪದಿಂದಣುಗನಾಗಿ ಬಪ್ಪ ಮೊದಲ...