ಚೌಕಿ ಮನೆಯಿಂದ ವೇಷ ರಂಗಕ್ಕೆ ಕಳಿಸುವುದೆಂದರೆ ಭೋಜನಕೂಟಗಳಲ್ಲಿ ಅಡುಗೆಯನ್ನು ಸರತಿಯಂತೆ ಪಂಕ್ತಿಗಳಿಗೆ ಕಳಿಸಿದಂತೆ. ಎಲೆ ಹಾಕಿ ಮೊದಲಿಗೆ ತೆಗೆದುಕೊಂಡು ಹೋಗುವುದೇನು? ನೀರು. ಜಗತ್ತಿಗೂ ಹಾಗೆಯೇ. ಭಗವಂತ ಮೊದಲು ಕೊಟ್ಟದ್ದು ನೀರನ್ನಂತೆ. ಜೀವ ದ್ರವ. ಜೀವಗಳ ಬೆಳವಣಿಗೆಗೆ ಮೂಲ. ಮೊಟ್ಟೆಯನ್ನು ಒಡೆದು ನೋಡಿದರೂ ಒಳಗಿರುವ ಭ್ರೂಣ ದ್ರವದಲ್ಲಿ ತೇಲಾಡುತ್ತಿರುತ್ತದೆ. ಇಷ್ಟು ಪುಷ್ಟಿ ಸಾಕಲ್ಲ? ನೀರಿನಲ್ಲೇ ಅಂತೆ ಹಿಂದೆ ಇದ್ದ ಜೀವಗಳು ವಸ್ತುಗಳು ಮುಳುಗಿದ್ದು. ಇಡೀ ವಿಶ್ವದಲ್ಲಿ ನೀರೋ ನೀರು. ಲೆಕ್ಕ ಪತ್ರಗಳು, ಪಾಪ ಪುಣ್ಯದ ಲೆಕ್ಕ ಎಲ್ಲ ಕೊಚ್ಚಿ ಹೋಯಿತು. ಜೀವರೆಲ್ಲ ನಾಶವಾದರೆಂದ ಮೇಲೆ ಲೆಕ್ಕ ಮಾತ್ರ ಇಟ್ಟುಕೊಂಡು ಏನು ಮಾಡುವುದು?
ಆಗ ಜಗತ್ತಿನ ತಾಯಿ ಸೃಷ್ಟಿಗೆ ಒಂದು ಮೂರ್ತ ರೂಪ ಕೊಟ್ಟಿದ್ದಿರಬೇಕು. ಅದನ್ನು ಬ್ರಹ್ಮ ಎನ್ನೋಣ. ಅವನ ನೆನಪಿನ ಚಿಪ್ಪಿನಲ್ಲಿ, ಸುಲಭದಲ್ಲಿ ಅರ್ಥವಾಗಬೇಕಾದರೆ memory card ನಲ್ಲಿ ಹಿಂದೆ ಇದ್ದ ಎಲ್ಲ ಸೃಷ್ಟಿಯ ನೀಲಿ ನಕಾಶೆ, ಅಥವಾ ನಮೂನೆಗಳು ನಿಕ್ಷೇಪವಾಗಿದ್ದುವು. ಅವೆಲ್ಲ ಬ್ರಹ್ಮನ ಹೊಟ್ಟೆಯಲ್ಲಿತ್ತು ಎಂದು ಸರಳವಾಗಿ ಹೇಳಬಹುದೇನೋ?! ಇಷ್ಟೆಲ್ಲ ತನ್ನಲ್ಲಿ ಇದೆ ಎಂದು ತಿಳಿದದ್ದೇ ತಡ. ಅವನ ತಲೆಗೇರಿತು. ತಾನೇ ದೊಡ್ಡವ ಎಂಬ ಅಹಂ ಭಾವ. ಅದನ್ನು ನಾವೆಲ್ಲಾ ದೇವೀ ಮಹಾತ್ಮೆಯ ಆಟಗಳಲ್ಲಿ ಸಾಕಷ್ಟು ಬಾರಿ ನೋಡಿದ್ದೇವೆ. ಆಗ ನಮ್ಮ ಭಗವಂತ, ಮೇಲು ಕೀಳು ಎಲ್ಲ ಮನಸ್ಸಿನ ಭಾವನೆ ಅಷ್ಟೇ, ನಿಜವಾಗಿ ಎಲ್ಲವೂ ಸಮಾನವೇ, ಶ್ರೇಷ್ಠವೇ ಎಂದು ತಿಳಿ ಹೇಳಿದ. ಅದನ್ನು ತೋರಿಕೊಡಲು ಅವನು ಹೊರಬರಲು ಆಯ್ಕೆ ಮಾಡಿದ್ದು ಬ್ರಹ್ಮನ ದೇಹದ ಅಧೋದ್ವಾರ.
ತುಂಬಿದ ಕೊಡ ತುಳುಕುವುದಿಲ್ಲ ನೋಡಿ! ಇದನ್ನು ಹೇಳಲೂ ನೀರೇ ಬೇಕು. ಇನ್ನೂ ಬೇಕೋ? ಸಾಗರವೂ ಹಾಗೆಯೇ. ತೆರೆಗಳು ತೀರಗಳಲ್ಲಿ ಮಾತ್ರ. ಆಳ ಸಮುದ್ರದಲ್ಲಿ ನಿತ್ಯ ನೀರವ, ಗಂಭೀರ ಮೌನ. ಹಾಗೆಂದು ಅದೂ ಕದಡುವುದಿಲ್ಲ ಎಂದಲ್ಲ. ಪ್ರಳಯ ಸದೃಶವಾದ ಹೆದ್ದೆರೆಗಳು ಬಂದಾಗ ಅಲ್ಲೂ ಅಲ್ಲೋಲಕಲ್ಲೋಲ ಆಗಬಹುದು.
ಇಲ್ಲಿ ನನ್ನ ಈ ಕೆಳಗಿನ ಅಪ್ರಕಟಿತ ಮುಕ್ತಕ ಪ್ರಸ್ತುತ ಎನ್ನಿಸೀತು.
ತುಂಬಿರುವ ಕೊಡವನ್ನು ಹೊರುವುದಸದಳವಲ್ಲ
ಅಂಬುಧಿಯ ನಡುವ ಜಲ ಶಾಂತವಲ್ತೆ??
ತುಂಬದಿಹ ಘಟಕೇನು ಡೌಲು ಡಂಭಕ ಗೊತ್ತೆ
ಅಂಬುಧಿಯ ತಟ ತೆರೆಯು ಗುರುನಾಥನೇ||೨೧||
ವಿಷ್ಣುವಿನ ಹೊಟ್ಟೆ ಹೊಕ್ಕಾಗಲೇ ಬ್ರಹ್ಮನಿಗೆ ಅರಿವಾದುದು, ತಾನೇನೂ ದೊಡ್ಡ ಸಂಗತಿಯಲ್ಲ ಎಂದು. ಹೊರಬರಲು ದಾರಿ ಹುಡುಕಿದ್ದೇ ಹುಡುಕಿದ್ದು. ಮೇಲಕ್ಕೆ ಹೋದಷ್ಟೂ ಮುಗಿಯದ ಆಯ ಆಕೃತಿ. ಇದು ಅಗದು ಅಂದುಕೊಂಡು ಕೆಳಗಿಳಿದರೆ ಕೆಳಗೂ ಮುಗಿಯದ ಪ್ರಪಾತ. ಒಂದು ಕ್ಷಣ ಮೇಲಾವುದು ಕೆಳಗಾವುದು ಎಂದೂ ಅರಿಯದ ಸ್ಥಿತಿ ಬಂದಾಗ ಭಗವಂತನ ಸ್ಮರಣೆ ಅವನ ನಾಲಿಗೆಯಲ್ಲೂ ಬಂತಂತೆ. ಆಗ ಹೊಕ್ಕುಳಿಂದ ಹೊರಬಂದದ್ದು ನಾವೆಲ್ಲಾ ಚಿತ್ರಗಳಲ್ಲಿ ಮತ್ತೆ ಆಟದಲ್ಲಿ ನೋಡಿದ್ದೇವೆ.
ಇರಲಿ, ಜ್ಞಾನೋದಯ ಪ್ರತಿಯೊಬ್ಬರಿಗೂ ಆಗುತ್ತದೆ. ಯಾವಾಗ ಆಯಿತು, ಎನ್ನುವುದರಿಂದ ಅವರ ಉದ್ಧಾರ ಮತ್ತು ಪತನಗಳು ನಿರ್ಣಯವಾಗುತ್ತವೆ.
ಮೊದಲು ಹೇಳಿದ ಪುಂಡುವೇಷಗಳು ಇವೆಯಲ್ಲ? ಅವರಿಗೆ ನಾಳೆಯಿಂದ ಬೇಡ ಅಂತ ಹೇಳಿದ ಕೂಡಲೇ ಆಗಿತ್ತಂತೆ ಜ್ಞಾನೋದಯ. ಅದರೆ ನಿರ್ಣಯದಿಂದ ಹಿಂದೆ ಸರಿಯುವುದಿಲ್ಲ, ಭಗವಂತ. ಭಕ್ತರ, ಅಭಿಮಾನಿಗಳ ಬೇಡಿಕೆಯ ಮೇರೆಗೆ ತಾನೇ ಎಲ್ಲ ನಡೆಯುವುದು? ಅಂತೂ ಮೇಳ ಬಿಟ್ಟರು. ನಿಮಗೆ ಗೊತ್ತಾಯ್ತಾ?? ಅ ಪುಂಡರು ಜಯ ವಿಜಯರು. ಆಭಿಮಾನಿಗಳು ನಾಲ್ಕು ಜನ ಸನಕಾದಿ ಮುನಿಗಳು. ಆಗಲೇ ಅಯ್ಕೆ ಸಿಕ್ಕಿತ್ತಂತೆ, ಕಡಿಮೆ ಕಷ್ಟವೆನ್ನಿಸುವ ಏಳು ಜನ್ಮವೋ? ಅಥವಾ ಹೆಚ್ಚು ಕಷ್ಟ ಪಡುವ ಇತರರಿಗೂ ಕಷ್ಟವನ್ನೇ ಉಂಟುಮಾಡುವ ಮೂರೋ? ಎಂದು. ಇವರು ಬೇಗ ಬರಬೇಕಲ್ಲಾ ಅದಕ್ಕೆ ಮೂರು ಅಂದರು.
ಇವರು ಯಾವ ಮೇಳ ಸೇರಿದರು? ವೇಷ ಹೇಗಿತ್ತು? ಮತ್ತೆ ನೋಡುವಾ .. ಆಯ್ತಾ !
ನಮಸ್ಕಾರ
ಸುಬ್ರಹ್ಮಣ್ಯ ಬರ್ವೆ ಎಂ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ