ಶುಕ್ರವಾರ, ಆಗಸ್ಟ್ 19, 2022

ವೇಷ ಲೇಖನ ಸರಣಿ ಭಾಗ ೪

#ವೇಷ 

ಭಾಗ ೪.

ಮೊನ್ನೆ ಹೇಳಿದ್ನಲ್ಲ?… ಊರು ಮುಳುಗಿಸುವಷ್ಟು ನೀರು… ಆ ನೀರು ಊರು ಮುಳುಗಿಸಿತು. ಆಗಲೇ ಕಡತಗಳೆಲ್ಲಾ ನೀರಲ್ಲಿ ಕೊಚ್ಚಿ‌ಹೋಯಿತು.  ಆಗ ಬ್ರಹ್ಮ ಅರ್ಜೆಂಟಲ್ಲಿ‌ ಒಂದು ಪುಸ್ತಕ ತೆಗೆದು ಕಂಕುಳಲ್ಲಿ ಇರಿಸಿಕೊಂಡ. ನಮ್ಮ‌ ಜನರಾದರೆ ಏನ್ ಮಾಡ್ತಾರೆ ಹೇಳಿ? ನೆರೆ ಬಂದ್ರೆ, ದುಡ್ಡಿನ ಚೀಲ ಮೊದಲಿಗೆ ತೆಗೆದಿಡುತ್ತಾರೆ. ಅದೇ ನೋಡಿ ನಾವು‌ ಹೀಗಿರೋದು. ಮಕ್ಕಳ ಶಾಲೆಯ ಪುಸ್ತಕಕ್ಕೂ ನಂತರದ ಆದ್ಯತೆ.

ಬ್ರಹ್ಮ ತೆಗೆದಿಟ್ಟ ಪುಸ್ತಕ ಅಂತಿಂಥದ್ದಲ್ಲ. ವೇದ.  ಅದೊಂದಿದ್ದರೆ ಎಲ್ಲ ಪುನಃ ಸೃಷ್ಟಿ ಮಾಡಬಹುದು ಎಂಬ ವಿಶ್ವಾಸ ಅವನಿಗೆ. ಅದು ದಿತಿಯ ಮಗ ತಮನಿಗೆ ತಿಳಿಯಿತು. ಆ ಪುಸ್ತಕ ಕಿತ್ತುಕೊಂಡು ತನ್ನ ಮನೆ ಅಟ್ಟದಲ್ಲಿ ಇಟ್ಟ. ಅವನಿಗೂ ಒಂದು ಆಸೆ ಇಡೀ‌ಜಗತ್ತನ್ನು ಜ್ಞಾನದ ಬಲದಿಂದ ಆಳಬೇಕು ಅಂತ. ಪುಸ್ತಕ ಕದ್ದವರಿಗೆಲ್ಲ ಜ್ಞಾನ ಒಲಿಯುತ್ತದೆಯೇ? ಅವನ ಮನೆ ಪಾತಾಳದಲ್ಲಿ ಇತ್ತಂತೆ.  ಆ ಪುಸ್ತಕದಲ್ಲಿದ್ದ ವಿದ್ಯೆ, ಜ್ಞಾನವೆಲ್ಲ ತಮನ ಪಾಲಾದರೆ ಎಲ್ಲ ಅಧ್ವಾನ ಮಾಡುತ್ತಾನೆ ಅಂತ ಎಲ್ಲರೂ ಹೆದರಿದರು. ಒಂದು ಧೈರ್ಯ ಅಂದರೆ ಒಮ್ಮೆ ಓದಿದರೆ ಅರ್ಥವಾಗದಂಥ ಪದಪುಂಜಗಳಲ್ಲಿ ಬರೆಯಲಾಗಿತ್ತು ವೇದ. ಮತ್ತೆ ಮತ್ತೆ ಓದಿದಾಗ ಬಾಯಿಪಾಠ ಮಾಡಿದಾಗ ಅದರ ಅರ್ಥ ತಿಳಿಯುವುದು ಅಂತ ಅಲ್ಲ, ಆದರೆ ಹೊಸ ಜ್ಞಾನ ಸ್ಫುರಣೆಯಾಗುತ್ತದೆ. ಅಂಥ ಕೋಡೆಡ್ ಭಾಷೆಯಲ್ಲಿ ಬರೆದ ವೇದಗಳನ್ನು ತಮ ಅಷ್ಟು ಬೇಗ ಅರ್ಥಮಾಡಿಕೊಳ್ಳಲಾರ ಎಂಬ ಧೈರ್ಯ. ಆದರೂ ಬೇಗ ತರಬೇಕಲ್ಲಾ? ಎಲ್ಲರೂ ಜಗತ್ತಿನ‌ ಚೌಕೀ ಮನೆ ವೈಕುಂಠಕ್ಕೆ ಬಂದರು. ನೆನಪಿಡಿ, ಸುತ್ತ ಎಲ್ಲ‌ ನೀರೇ.  ಏನಾದ್ರೂ‌ ಮಾಡಿ ಪುಸ್ತಕ ತಂದುಕೊಡು ದೇವ್ರೇ ಅಂತ ಬ್ರಹ್ಮ‌ ಗೋಗರೆದ.

ವಿಷ್ಣು ವೇಷಕ್ಕೆ ಕೂತ. ಮೀನಿನ ರೆಕ್ಕೆ ಕಿವಿರು‌ ಎಲ್ಲ‌ ಕಟ್ಟಿಕೊಂಡ. ಕಟ್ಟಿಕೊಂಡದ್ದೋ ಹುಟ್ಟಿಕೊಂಡದ್ದೋ ಅಂತ ಗೊತ್ತಾಗದಂಥ ನಾಜೂಕು. ಅಂಥಾ ಚಾಕಚಕ್ಯತೆ ವೇಷದಲ್ಲಿ. ವೇಷ ಮಾಡಿದ್ರೆ ಹಾಗೆ ಮಾಡ್ಬೇಕು. ಮುಖಕ್ಕೆ ಬಣ್ಣ ಬೇಕೂಂತ ಇಲ್ಲ. ನೀರಿನಲ್ಲೇ ಇಳಿಯಬೇಕಾದ ಮೀನು ಅಲ್ವಾ. 

ರಭಸದಿಂದ ಇಳಿದು ಪಾತಾಳಕ್ಕೆ ಹೋಗಿ ತಮನಿಂದ ಪುಸ್ತಕ ತಂದು ಬ್ರಹ್ಮನಿಗೆ ಕೊಟ್ಟ. ತಮನನ್ನು ಕೊಂದ. 

ತನ್ನ ಮಗನನ್ನು ಕೊಂದನಲ್ಲಾ ಅಂತ ದಿತಿಗೆ ಕೋಪ. ಯಾರಮೇಲೆ ಅಂತ ಇಲ್ಲ ಒಟ್ಟು ಕೋಪ. ತನ್ನ ಮಗ ತಮ ಮಾಡಿದ್ದು ಸರಿಯಿಲ್ಲ ಎಂಬ ಅರಿವು ಒಳಗೊಳಗೆ ಅವಳಿಗೂ ಇತ್ತು. ಆದರೆ ಒಪ್ಪಿಕೊಳ್ಳಲು ಅದಿತಿಯ ಮೇಲಿನ ಕಿಚ್ಚು ಬಿಡಬೇಕಲ್ಲ.. ಕಶ್ಯಪರು ಅದಿತಿಯ ಮಕ್ಕಳನ್ನೇ ರಕ್ಷಿಸೋದು ಅಂತ ಅವರ ಮೇಲೂ ಸಿಟ್ಟು.

ಒಟ್ಟು ತಲೆ ಕೆಟ್ಟಿತ್ತು. ಕಶ್ಯಪರದ್ದು ಮುಗಿಯದ ಅನುಷ್ಠಾನ. ಒಂದು ಮುಗಿದ ತಕ್ಷಣ ಇನ್ನೊಂದು. ಬ್ರಹ್ಮ ಕೊಟ್ಟ ಸೃಷ್ಟಿ ಕಾರ್ಯ ಬರೇ ಅದಿತಿಯ ಮೂಲಕ ಮಾತ್ರ ಆದರೆ ಸಾಕೆ? ಇನ್ನುಳಿದವರಿಗೂ ಸಂತಾನ ಬೇಡವೇ?  ಕಾದು ಕಾದು ಹೊತ್ತಲ್ಲದ ಹೊತ್ತು ಮುಸ್ಸಂಜೆಯಲ್ಲಿ ಹೋಗಿ ತನ್ನ ಕಷ್ಟ ಹೇಳಿಕೊಂಡಳು. ತನ್ನ ಮಕ್ಕಳೆಲ್ಲಾ ಕೊಲೆಯಾದರು ಹೀಗೆ ಆದರೆ ತನ್ನ ಹೆಸರು ಹೇಳಲು ಯಾರೂ ಉಳಿಯುವುದಿಲ್ಲ ಇತ್ಯಾದಿ ಇತ್ಯಾದಿ. 

ನಮ್ಮ ಯಕ್ಷಗಾನದಲ್ಲಿ, ಯಾವುದನ್ನು ಹೇಳದೇ ಹೇಳಿಬಿಡಬೇಕೋ, ಅಂಥ ಸನ್ನಿವೇಷ ಬಂದಾಗ ಪರದೆ ಎಳೆದರೆ ಸೈ. ಹಾಗೆ ಈಗ ಪರದೆ ಎಳೆದುಬಿಡೋಣ.‌

ದಿತಿ ದೇವಿಯ ಹಟ ಗೆದ್ದಿತು. ಗರ್ಭಿಣಿಯಾದಳು. ಅವಳಿ ಮಕ್ಕಳನ್ನು ಹಡೆದಳು. ಪರದೆ ಎತ್ತಿದಾಗ ನಮ್ಮ‌ ಪುಂಡುವೇಷದವರ ಜೋಡಿ ರಾಕ್ಷಸ ವೇಷ. ಉತ್ಪಾತ ನೋಡಬೇಕು. ನಾಯಿಗಳು ಊಳಿಟ್ಟುವಂತೆ, ಉಲ್ಕಾಪಾತವಾಯಿತಂತೆ, ನೆರೆ ಬಿರುಗಾಳಿಗಳು ಬಂದವಂತೆ. ಈಗಿನ ಜನ ಕೇಳುವುದಿಲ್ಲ. ಇಲ್ಲದಿದ್ದರೆ ಮುಸ್ಸಂಜೆ ಹೊತ್ತು ಅಥವಾ ಮನೆಗಳಲ್ಲಿ ದೀಪ ಹಚ್ಚುವ ಹೊತ್ತು ಎಲ್ಲೂ ಹೊರಗಡೆ ತಿರುಗಾಡಬಾರದು, ಶಿವ ಪ್ರಪಂಚ ಸಂಚಾರ ಮಾಡುವ ಹೊತ್ತು ಅಂತ ಹೇಳ್ತಾರೆ. ಅಂಥ ಹೊತ್ತಿನ ಆಸೆಯಿಂದ ಆದ ಅನರ್ಥ ಉತ್ಪಾತಗಳೇ ಆದುವು.

ಎಲ್ಲವನ್ನು ಸಾಂಕೇತಿಕವಾಗಿ ತೋರಿಸಬೇಕಲ್ಲಾ? ಆಗ ಸಹಾಯಕ್ಕೆ ಬರುವುದು ದೊಂದಿ, ರಾಳದ ಪುಡಿ, ಚಂಡೆಯ ಗದ್ದಲ.  

ಈ ದಿತಿಯ ಮಕ್ಕಳು ಹುಟ್ಟಿದ ತಕ್ಷಣ ಮೇಲೆ ನೋಡುವುದು. ದೇವತೆಗಳು ಇದ್ದಾರಲ್ಲಾ? ಅವರಿದ್ದ ಮಟ್ಟಕ್ಕೆ ಏರುವ ಯೋಚನೆಯಿಲ್ಲದಿದ್ದರೂ ಅವರನ್ನು ಕಾಲು ಎಳೆದು ಕೆಳಗೆ ಬೀಳಿಸುವ ಯೋಚನೆ ಇದೆ. ದೇವೇಂದ್ರ ದೇವಪೀಠಕ್ಕೇರಲು ನೂರು ಆಶ್ವಮೇಧ ಮಾಡಿ ಕಷ್ಟ ಪಟ್ಟು ಮೇಲೆ ಬಂದವನು.  ದೈತ್ಯರು ರಟ್ಟೆಯ ತ್ರಾಣದಿಂದ ಒಮ್ಮೆ ಪುರಂದರನನ್ನು ಕೆಳಗಿಳಿಸಿದರೂ  ಆ ಪಟ್ಟ ಶಾಶ್ವತವಾಗಿ ಅವರಿಗೆ ಆಗುವುದು ಸಾಧ್ಯವಿಲ್ಲ. 

ಈ ಬಾರಿ ದಿತಿ ದೇವಿ ಬಡ ಪೆಟ್ಟಿಗೆ ಬಿಡುವಂತೆ ಕಾಣುತ್ತಿಲ್ಲ. ಹಾಗೇ ಏರಬೇಡಿ. ತಪಸ್ಸು ಮಾಡಿ, ತಾಲೀಮು ಮಾಡಿ ಅಂತೆಲ್ಲ ತಾಕೀತು ಮಾಡಿ ಕಾಡಿಗೆ ಕಳಿಸಿದಳು.

ತಪಸ್ಸಿಗೆ..

ಇವತ್ತಿಗೆ ಸಾಕು. ನಾಳೆ ನೋಡುವಾ.

ಸುಬ್ರಹ್ಮಣ್ಯ ಬರ್ವೆ ಎಂ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಶಿವಾಪರಾಧ ಕ್ಷಮಾಪಣ ಸ್ತೋತ್ರದ ಕನ್ನಡ ಅನುವಾದ

ಶ್ರೀ ಆದಿ ಶಂಕರಾಚಾರ್ಯರ ಶಿವಾಪರಾಧ ಕ್ಷಮಾಪಣ ಸ್ತೋತ್ರದ ಕನ್ನಡ ಅನುವಾದದ‌ಯತ್ನ. ತಪ್ಪುಗಳಿದ್ದರೆ ಕ್ಷಮಿಸಿ, ಹರಸಿ. ಶಿವ ಶಿವ ಶಿವ ಭೋ  ಅಣು ರೂಪದಿಂದಣುಗನಾಗಿ ಬಪ್ಪ ಮೊದಲ...