#ವೇಷ
ಭಾಗ ೫
ಈಗ ಜಯ ವಿಜಯರ ವೇಷ ಮಾಡುತ್ತಿದ್ದವರಿಗೆ ದೊಡ್ಡ ವೇಷ. ಹಿರಣ್ಯಾಕ್ಷ, ಹಿರಣ್ಯಕಶಿಪು. ಹಿರಣ್ಯಾಕ್ಷ ಚಿನ್ನದ ಕಣ್ಣುಳ್ಳವನು, ಗಮನಿಸಿ! ಕಣ್ಣುಳ್ಳವನು ಚಿನ್ನದ ದೃಷ್ಟಿಯುಳ್ಳವನಲ್ಲ. ಚಿನ್ನದ ಕಣ್ಣು ಚಂದಕ್ಕೆ ಮಾತ್ರ. ಆ ಕಣ್ಣಿಂದ ನೋಡಿದ್ದೆಲ್ಲಾ ಚಿನ್ನವಲ್ಲ. ಯಾರೋ ಸರಿಯಾಗೇ ಹೇಳಿದ್ದಾರೆ. ಸೌಂದರ್ಯ ನೋಡುವ ಕಣ್ಣುಗಳಲ್ಲಿದೆ, ವಸ್ತುಗಳಲ್ಲಲ್ಲ ಎಂದು. ಚಿನ್ನದ ಬಣ್ಣ ಹಳದಿ ಅಲ್ವೇ? ಹಾಗಾಗಿ ಹಿರಣ್ಯಾಕ್ಷನಿಗೆ ನೋಡಿದ್ದೆಲ್ಲಾ ಕೆಟ್ಟದ್ದಾಗಿ ಕಾಣುವುದು. ಕಾಮಾಲೆ ಕಣ್ಣಿನಂತೆ.
ಹಿರಣ್ಯಾಕ್ಷ ತಪಸ್ಸು ಮಾಡಿದ್ದೇ ಮಾಡಿದ್ದು. ಓಂ ಬ್ರಹ್ಮದೇವಾಯ ನಮಃ ಅಂತ ಎರಡು ಸಾರಿ ಕೂಗುವಷ್ಟರಲ್ಲಿ ಬ್ರಹ್ಮ ಕಾಯ್ತಾ ಇದ್ದ ಅಂತ ಕಾಣುತ್ತೆ, ಕೂಡಲೇ ಬಂದು ಆಶೀರ್ವಾದ ಭಂಗಿಯಲ್ಲಿ ನಿಂತು 'ವತ್ಸಾ ಏನು ಬೇಕು ಕೇಳು, ಕೇಳಿದ್ದನ್ನು ಕೊಡುತ್ತೇನೆ' ಅಂದ. ಅದು ಬಾಯಿ ಪಾಠದ ಮಾತು. ಯಾರೇ ಅವನನ್ನು ಓಂ….. ಅಂತ ಕರೆದ್ರೆ ಕೇಳೋ ಡೈಲಾಗ್ ಇದೊಂದೇ.
'ಮರಣವಿಲ್ಲದ ವರ ಕೊಡು'
'ಅದೊಂದು ಬಿಟ್ಟು ಬೇರೆ ಏನು ಬೇಕಾದರೂ ಕೇಳು ಕೊಡುತ್ತೇನೆ'
ಇದೂ ಬಾಯಿಪಾಠವೇ. ಅದು ಸಿಗುವುದಿಲ್ಲ ಅಂತ ಗೊತ್ತಿದ್ದೂ ಕೇಳುವ ಪ್ರಶ್ನೆ. ಚೌಕಾಶಿ ವಿಧಾನ. ಸಂತೆಯಲ್ಲಿ ಸರಕು ಮಾರುವವ ೨೦೦ ರ ಸಾಮಾನಿಗೆ ೧೦೦೦ ಹೇಳಿ ನಂತರ ಕಮ್ಮಿಮಾಡಿಸುವುದು. ಎಷ್ಟು ಕಮ್ಮಿ ಬಂದರೂ ೩೦೦ - ೪೦೦ ಗ್ಯಾರಂಟೀ. ಇದೂ ಹಾಗೇ.
' ಹೌದಾ …. ಹಾಗಾದರೆ, ನನಗೆ ಮರಣ ಬರುವುದೇ ಆದರೆ ಸುರನರೋರಗಕಿನ್ನರಕಿಂಪುರುಷ ಪ್ರಾಣಿ ಪಕ್ಷಿ ಕ್ರಿಮಿ ಕೀಟಾದಿಗಳಿಂದಲೂ ಬರಬಾರದು. ನನಗೆ ದಿನವೂ ೧೦೦ ಹಂದಿ ಆಹಾರವಾಗಿ ಸಿಗಲಿ. ಮರಣ ಬರುವುದಾದರೂ ಹಂದಿಯಿಂದ ಬರಲಿ'
ಸಿಕ್ಕಿ ಬಿದ್ದ ನಮ್ಮ ರಾಕ್ಷಸ. ಅವನಿಗೆ ಒಂದು ಅತೀ ಆತ್ಮವಿಶ್ವಾಸ. ತಾನು ದಿನಾಲು ೧೦೦ ಹಂದಿ ಕೊಲ್ಲುವ ತನಗೆ ಹಂದಿ ಏನು ಮಾಡೀತು? ಅಂತ.
'ತಥಾಸ್ತು'
ಬಾಯಿಪಾಠದ ಬ್ರಹ್ಮ ಚೌಕಿಗೆ ಮರಳಿದ.
ಈಗ ಹಿರಣ್ಯಾಕ್ಷನ ಆಟೋಪ ನೋಡಬೇಕು. ಮಂಗನಿಗೆ ಕಳ್ಳು ಕುಡಿಸಿದ ಹಾಗೆ. ಎಲ್ಲ ಕಡೆ ಹೋಗಿ ಹುಡುಕಿ ಹುಡುಕಿ ವೀರರನ್ನು ಸೋಲಿಸುತ್ತಾ ಕೊಲ್ಲುತ್ತ ನಡೆದ. ಇನ್ನಾರು ಇದ್ದಾರೆ ಅಂತ ಹುಡುಕಾಟದಲ್ಲೂ ಅನೇಕ ಸುತ್ತು ಬಂದ. ನಾರದರು ಸಿಕ್ಕಿದರು. ನಾರದರು ಒಮ್ಮೊಮ್ಮೆ ಬೆಕ್ಕು ಅಡ್ಡ ಬಂದ ಹಾಗೆ ಬರುವುದು. ಅವರಿಗೆ ಯಾರತ್ರವೂ ವೈರ ಇಲ್ಲ. ನಾರಾಯಣ ಅಂತಲೂ ಹೇಳ್ತಾರೆ, ಶಂಕರ ಅಂತಲೂ ಹೇಳ್ತಾರೆ. ಎಲ್ಲಿ ಯಾವುದು ಹೇಳಬೇಕು ಅಂತಲೂ ಗೊತ್ತಿದೆ.
ಸರಿ, ಹಿರಣ್ಯಾಕ್ಷ ಇನ್ನಾರು ವೀರರಿದ್ದಾರೆ ಅಂತ ಕೇಳಿದ.
'ನಂ ನಾರಾಯಣ ಇದ್ದಾನೆ' ಅಂತ ಹೇಳಿದರು ನಾರದರು.
ವರ ಇದೆಯಲ್ಲಾ? ನಾರಾಯಣ ಏನು ಮಾಡಿಯಾನು?
'ನಾನು ಅವನನ್ನು ಹುಡುಕಿಕೊಂಡು ಹೋಗಿದ್ದೆ. ವೈಕುಂಠದಿಂದ ಜಾಗ ಖಾಲಿ ಮಾಡಿ ಓಡಿ ಹೋಗಿದ್ದಾನೆ' ಅಂದ ಹಿರಣ್ಯಾಕ್ಷ.
ನಾರದರು ಚೌಕಿಯಲ್ಲಿ ನೋಡ್ಕೊಂಡೇ ಬಂದಿದ್ದಾರೆ.
'ನೀನು ಒಂದು ಕೆಲಸ ಮಾಡು, ಅವನ ಹೆಂಡತಿ ಭೂಮಿಯನ್ನು ಅಪಹರಿಸು. ಆಗ ಮೂಗುದಾರ ಎಳೆದ ಎತ್ತಿನ ತರ ಬರುತ್ತಾನೆ'
ಅಂತ ಬೋಧನೆ ಮಾಡಿದರು. ನಾರದರು ಒಳ್ಳೇದಕ್ಕೆ ಹೇಳ್ತಾರೋ ಹಾಳಾಗ್ಲಿಕ್ಕೆ ಹೇಳ್ತಾರೋ ಗೊತ್ತೇ ಆಗುವುದಿಲ್ಲ. ಹಿರಣ್ಯಾಕ್ಷ ಭೂಮಿಯನ್ನು ಅಪಹರಿಸಿ ರಸಾತಲದಲ್ಲಿ ಇಟ್ಟ. ಅವಳ ಬಗ್ಗೆ ಚಿಂತಿಸುತ್ತಾ ಕನಸು ಕಾಣುತ್ತಾ ತಿಂದ ಹಂದಿಯ ಲೆಕ್ಕ ತಪ್ಪಿತು. ನೂರಾದುದೇ ಗೊತ್ತಾಗ್ಲಿಲ್ಲ.
ನಾರಾಯಣ ಸಿಗುವುದೊಂದು ಬಾಕಿ, ನೆಲ ಅಗೆಯುತ್ತಾ ಮರ ಬೀಳಿಸುತ್ತಾ ಮುನ್ನುಗ್ಗುತ್ತಿದ್ದ. ನಾರಾಯಣ ಬರಲಿಲ್ಲ. ಚೌಕಿಯಿಂದ ಹಂದಿ ಬಂತು, ಬಿಳಿ ಹಂದಿ, ಶ್ವೇತವರಾಹ ಅಂತಲೂ ಕರೆಯುತ್ತಾರೆ. ಭಾರಿ ಚಂದ ಆಗಿತ್ತು ವೇಷ. ಹಂದಿ ಬಂದದ್ದೇ ಬಂದದ್ದು ಬಾಯಿಯಲ್ಲಿ ನೀರೂರಿತು.
ಬ್ರಹ್ಮನ ವರದ ಒಳಾರ್ಥ ಗೊತ್ತಾಗ್ಲಿಲ್ಲ ಹೆಡ್ಡನಿಗೆ. ನೂರು ಹಂದಿ ಆಹಾರವಾಗಲಿ. ಅಂತ ವರ. ಅಂದರೆ ನೂರಾ ಒಂದನೆಯದನ್ನು ಕೆಣಕಬೇಡ ಅಂತ ಒಳಾರ್ಥ. ಹಂದಿಯನ್ನು ಕೆಣಕಿದ. ಆಗಲೇ ಕುಣಿದು ಕುಣಿದು ದಣಿದಿದ್ದ. ವೀರರನ್ನು ಜಗತ್ತಿನೆಲ್ಲೆಡೆ ಹುಡುಕಿ ಸೋಲಿಸಿ ತಾನೂ ಸುಸ್ತಾಗಿದ್ದ. ಹಂದಿಯನ್ನು ಎದುರಿಸಲಾಗಲೇ ಇಲ್ಲ. ಹಿರಣ್ಯಾಕ್ಷನನ್ನು ತಿವಿದು ಕೊಂದಿತು. ಭೂಮಿಯನ್ನು ರಸಾತಳದಿಂದ ಬಿಡಿಸಿ ಕರೆತಂದ.
ಭೂಮಿಗೆ ಗೊತ್ತಾಗಿ ಹೋಯಿತು. ಈ ಹಂದಿ ಯಾರು ಅಂತ. ದಿತಿಯ ಅಕಾಲಿಕ ಆಸೆ ಎರಡು ಬಣ್ಣದ ವೇಷಕ್ಕೆ ವೇದಿಕೆ ಸೃಷ್ಟಿಸಿತು. ಈಗ ಭೂಮಿಗೂ ಒಂದು ಆಸೆಯಾಯಿತು. ಈ ರೂಪದಲ್ಲೂ ನಾರಾಯಣ ಬರುತ್ತಾನಾದರೆ ಹಾಗೇ ಅವನಲ್ಲಿ ಐಕ್ಯವಾಗಬೇಕು ಅಂತ. ತೆರೆ ಪುನಃ ಎಳೆದರು. ಈ ಆಸೆಯೂ ಒಳ್ಳೆಯ ಪರಿಣಾಮ ನೀಡಲಿಲ್ಲ. ಏನಾಯ್ತು ಅಂತ ನಾಳೆ ಹೇಳ್ತೇನೆ.
ನಮಸ್ಕಾರ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ