#ಸುಭಾಷಿತಗಳೆಂಬವಿಸ್ಮಯ
ಇಂದಿನಸುಭಾಷಿತ.
ಆಚಾರಾಲ್ಲಭತೇ ಚಾಯುರಾಚಾರಾಲ್ಲಭತೇ ಪ್ರಜಾ | ಆಚಾರಾದನ್ನಮಕ್ಷಯ್ಯಮಾಚಾರೋ ಹಂತ ಪಾತಕಮ್|
ಆಚಾರಃ ಪರಮೋ ಧರ್ಮ ಆಚಾರಃ ಪರಮಂತಪಃ
ಆಚಾರಃ ಪರಮಂ ಜ್ಞಾನಂ ಆಚಾರಾತ್ ಕಿಂ ನ ಸಾಧ್ಯತೇ?|
ಆಚಾರ ಎನ್ನುವ ಪದದ ಅರ್ಥವ್ಯಾಪ್ತಿ ತುಂಬಾ ದೊಡ್ಡದು. ಹಾಗಾಗಿ. ಬೇರೆಯವರಿಗೆ ತೊಂದರೆ ಕೊಡದಿರುವುದೂ ಆಚಾರವೇ. ಪರೋಪಕಾರವೂ ಆಚಾರವೇ. ಆಚಾರದಿಂದ ಆಯಸ್ಸು ವೃದ್ಧಿಯಾಗುವುದು, ಸತ್ ಸಂತತಿ ಪ್ರಾಪ್ತಿಯಾಗುವುದು, ಆಚಾರದಿಂದ ಅನ್ನ, ಸಂಪತ್ತು ಅಕ್ಷಯವಾಗುತ್ತದೆ ಆಚಾರ ಪಾಪವನ್ನು ಕಳೆಯುತ್ತದೆ. ತಾನು ಆಚಾರವಂತನೆನ್ನಿಸಿಕೊಳ್ಳಲು ವರುಷಗಳ ಪರಿಶ್ರಮ ಬೇಕು.
ಆರೋಗ್ಯಕರವಾದ ಜೀವನ ಪದ್ಧತಿ, ಆಹಾರ ಪದ್ಧತಿಗಳು ಜೀವನವನ್ನೇ ಹಸನುಮಾಡುತ್ತವೆ. ಆದರೆ ಬಾಹ್ಯ ಪ್ರಪಂಚದ ಪ್ರಲೋಭನೆಗಳ ಮಧ್ಯೆ ಇಂತಹ ಸಾತ್ವಿಕ, ಮೇಲ್ನೋಟಕ್ಕೆ ಸಪ್ಪೆಯಾಗಿ ತೋರುವ, ಪರಿಣಾಮದಲ್ಲಿ ಸಿಹಿಯಾಗಿರುವ ವಿಚಾರಗಳತ್ತ ಗಮನ ಹರಿಸುವುದೆಂತು? ಅಷ್ಟೇ ಅಲ್ಲದೇ ಇವುಗಳಿಂದ ಇಚ್ಛಿತ ಪರಿಣಾಮ instant coffee ಥರ ಕೂಡಲೇ ಸಿಗುವುದಿಲ್ಲ. ಬೀಜ ಬಿತ್ತಿ, ನೀರೆರೆದು ಗೊಬ್ಬರ ಹಾಕಿ ಕಳೆ ತೆಗೆದು ಬೆಳೆಯುವವರೆಗೆ ಕಾದಾಗ ಮಾತ್ರ ಫಲ ಪ್ರಾಪ್ತಿ.
ಕಾಯುವ ಕೆಲಸವೆಲ್ಲ ನಮ್ಮಿಂದಾಗಲಿಕ್ಕಿಲ್ಲ. ನಮಗೇನಿದ್ದರೂ ಕೂಡಲೇ ಸಿಗಬೇಕು ಅನ್ನುವವರೂ ಇದ್ದಾರೆ. ಹಿಂದಿಯಲ್ಲಿ ಒಂದು ಗಾದೆಯಿದೆ. ಜಲ್ದೀ ಕಾ ಕಾಮ್ ಸೈತಾನ್ ಕಾ. ಅವಸರವಸರವಾಗಿ ಮಾಡಿದ ಕಾರ್ಯ ಕೆಟ್ಟುಹೋಗುತ್ತದೆ.
ಸುಬ್ರಹ್ಮಣ್ಯ ಬರ್ವೆ ಎಂ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ